ಬೆಂಗಳೂರು, ಏ.9- ಭಾರತದಲ್ಲೇ ಪ್ರಥಮ ಬಾರಿಗೆ ಆನೆ ಹುಲ್ಲುನಿಂದ ಅನಿಲ, ಡೀಸೆಲ್, ವಿದ್ಯುತ್ ಹಾಗೂ ಸಾವಯವ ಗೊಬ್ಬರವನ್ನು ಉತ್ಪಾದಿಸಬಹುದಾಗಿದೆ ಎಂದು ಸೂರಜ್ ಭೂಮಿ, ಬಯೋಗ್ಯಾಸ್ ಲಿಮಿಟೆಡ್ನ ವ್ಯವಸ್ಥಾಪಕ ಡಾ.ಬಿ.ಶಾಂತರಾಜು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹುಲ್ಲನ್ನು ಹಲವು ವರ್ಷಗಳಿಂದ ಪಾಳುಬಿದ್ದ ಹೊಲದಲ್ಲಿ ಬೆಳೆಸಬಹುದಾಗಿದೆ. ಇದು 8 ಅಡಿ ಉದ್ದ ಬೆಳೆಯುವ ಹುಲ್ಲಾಗಿದ್ದು, ಇದನ್ನು ಒಂದು ಬೆಳೆಯಾಗಿ ಅಥವಾ ಸಮ್ಮಿಶ್ರ ಬೆಳೆಯಾಗಿ ಬೆಳೆಸಬಹುದಾಗಿದೆ ಎಂದರು.
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ದೃಢೀಕೃತ ಸ್ವದೇಶದಲ್ಲಿ ನವೀಕರಿಸಬಹುದಾದ ಕೃಷಿ ತಂತ್ರಜ್ಞಾನವನ್ನು ಬಯೋ ಸಿಎನ್ಜಿಯನ್ನು ಉತ್ಪಾದಿಸಲು ಅನುಷ್ಠಾನಗೊಳಿಸಲಾಗಿದೆ. ಇದು ಡೀಸೆಲ್, ಪೆಟ್ರೋಲ್ ಹಾಗೂ ಗೃಹಪಯೋಗಿ ಹಾಗೂ ವಾಣಿಜ್ಯ ಬಳಕೆಯ ಎಲ್ಪಿಜಿಗೆ ಪರ್ಯಾಯವಾಗಿದೆ.
ಇದು ಪರಿಸರ ಸ್ನೇಹಿ, ಮಾಲಿನ್ಯ ಮುಕ್ತ, ಸುರಕ್ಷಿತ ಉತ್ತಮ ಗುಣಮಟ್ಟ ಮತ್ತು ಸ್ವದೇಶದಲ್ಲಿ ನವೀಕರಿಸಬಹುದಾದ ತಂತ್ರಜ್ಞಾನದಿಂದ ಅಭಿವೃದ್ದಿಗೊಳಿಸಲಾದ ಇಂಧನ ಮೂಲವಾಗಿದೆ ಎಂದು ತಿಳಿಸಿದರು.
ಈ ಆನೆ ಹುಲ್ಲುಗಳನ್ನು ಬೆಳೆಯುವುದನ್ನು ಪ್ರೋತ್ಸಾಹಿಸಿದರೆ ಹೆಚ್ಚಿನ ಉದ್ಯೋಗಗಳನ್ನು ಕಲ್ಪಿಸಬಹುದಾಗಿದೆ. ವಾತಾವರಣದಲ್ಲಿ ಹಸಿರುಮನೆ ಪರಿಣಾಮವನ್ನು ತಗ್ಗಿಸಿದರೆ ವಾತಾವರಣ ಮಾಲಿನ್ಯ ಮುಕ್ತವಾಗಿ ಇಂಗಾಲದಪ್ರಮಾಣ ಕಡಿಮೆಯಾಗಿ ಜನಸಾಮಾನ್ಯರ ಆರೋಗ್ಯವನ್ನು ಸುಧಾರಿಸುತ್ತದೆ ಎಂದರು.
ಸಂಸ್ಥೆ ವತಿಯಿಂದ ರೈತರಿಗೆ ಹುಲ್ಲಿನ ಕಡ್ಡಿಯನ್ನು ನೀಡಲಾಗುತ್ತದೆ. ಇದು ಮೂರಡಿ ಉದ್ದ ಬೆಳೆದ ನಂತರ ಸಂಸ್ಥೆಯವರು ತೆಗೆದುಕೊಂಡು ಗ್ಯಾಸ್ ಉತ್ಪಾದನೆ ಮಾಡುತ್ತಾರೆ. ಇದು 30 ದಿನ ನೀರಲ್ಲದಿದ್ದರೂ ಸಹ ಬೆಳೆಯುತ್ತದೆ.