ಮಹದೇವಪುರ, ಏ.9-ಮೋದಿ ಪರ ಬಿಜೆಪಿ ಸರ್ಕಾರಕ್ಕೆ ಮತ ಹಾಕಬೇಡಿ ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಕೆ.ಇ.ಕೃಷ್ಣಮೂರ್ತಿ ಇಂದಿಲ್ಲಿ ತಿಳಿಸಿದ್ದಾರೆ.
ವೈಟ್ಫೀಲ್ಡ್ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ನೀಡಿದ್ದ ಭರವಸೆಗಳಲ್ಲಿ ಒಂದೂ ಈಡೇರಿಸದೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿರುವ ತೆಲುಗು ಜನರು ಮೋದಿ ಅವರ ಪಕ್ಷಕ್ಕೆ ಮತ ಹಾಕಬೇಡಿ ಎಂದು ಮನವಿ ಮಾಡಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಆಂದ್ರಪ್ರದೇಶ ರಾಜದಾನಿ ಅಮರಾವತಿ ನಿರ್ಮಾಣ ಫಂಡ್, ಕಡಪ ಸ್ಟೀಲ್ ಬ್ರಿಡ್ಜ್, ವೈಜಾಕ್ ರೈಲ್ವೆ ಜೋನ್ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ನೆರವೇರಿಸುವುದಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ತಿಳಿಸಿದ್ದರು. ಆದರೆ ಅವರು ನೀಡಿದ್ದ ಯಾವುದೇ ಭರವಸೆಯನ್ನು ಒಂದೂ ಈಡೇರಿಸದ ಕಾರಣ ಬಿಜೆಪಿ ಜೊತೆ ಸಮಿಶ್ರ ಮಾಡಿಕೊಂಡಿದ್ದ ತೆಲುಗುದೇಶಂ ಪಾರ್ಟಿ ಇದೀಗ ಬಿಜೆಪಿ ಪಕ್ಷವನ್ನು ನಂಬಿ ತಾವು ಮೋಸ ಹೋದಂತೆ ಮತ್ತೆ ಯಾರೂ ಮೋಸ ಹೋಗಬಾರದೆಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವೇರುತ್ತಿದ್ದು, ಪ್ರಾರಂಭದಲ್ಲೇ ಬಿಜೆಪಿಗೆ ಒಂದಿಲ್ಲೊಂದು ಕಂಟಕಗಳು ಎದುರಾಗುತ್ತಿವೆ. ನಿನ್ನೆಯಷ್ಟೇ ತಮಿಳುನಾಡಿನ ನಾನ್ ತಮಿಳಿಯನ್ ಸಂಘಟನೆ ರಾಜ್ಯದಲ್ಲಿರುವ ತಮಿಳುಗರಿಗೆ ಬಿಜೆಪಿಗೆ ಮತ ನೀಡದಂತೆ ಕರೆ ನೀಡಿದ್ದಾರೆ. ಇದರ ಬೆನ್ನೆಲ್ಲೇ ಇಂದು ಆಂಧ್ರ ಡೆಪ್ಯೂಟಿ ಸಿಎಂ ಕೆ.ಇ.ಕೃಷ್ಣಮೂರ್ತಿ ಮೋದಿ ವಿರುದ್ಧ ಹರಿಹಾಯ್ದಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಮಾರ್ಪಟ್ಟಿದೆ.