ಕಡೂರು, ಏ.6- ಕ್ಷುಲ್ಲಕ ಕಾರಣಕ್ಕೆ ಒಂದು ಕೋಮಿನ ಜನರು ಮತ್ತೊಂದು ಕೋಮಿನ ಜನರು ವಾಸಿಸುವ ಗ್ರಾಮಕ್ಕೆ ಏಕಾಏಕಿ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ ನಡೆದಿದೆ.
ಘಟನೆಯಲ್ಲಿ ಒಂದು ಕೋಮಿನ ಐವರು ಮತ್ತು ಇನ್ನೊಂದು ಕೋಮಿನ ನಾಲ್ವರಿಗೆ ಗಂಭೀರ ಗಾಯಗಳಾಗಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ 13 ಮಂದಿಯನ್ನು ಕಡೂರು ಪೆÇಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಘಟನೆ ವಿವರ : ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಅಪರಿಚಿತ ವ್ಯಕ್ತಿ ಬೈಕ್ನಲ್ಲಿ ವೇಗವಾಗಿ ಗ್ರಾಮದೊಳಗೆ ಸಾಗಿ ಪಕ್ಕದ ಗ್ರಾಮವಾದ ಚೌಡ್ಲಪುರ ರಸ್ತೆಯಲ್ಲಿ ತೆರಳುವಾಗ ಒಂದು ಕೋಮಿನ ವ್ಯಕ್ತಿಗೆ ಬೈಕ್ ತಗುಲಿತು ಎಂದು ಹೇಳಲಾಗಿದೆ.
ನಂತರ ಆ ಅಪರಿಚಿತ ವ್ಯಕ್ತಿ ಬೈಕ್ ನಿಲ್ಲಿಸದೆ ತೆರಳಿದ್ದಾನೆ. ಇದರಿಂದ ಕುಪಿತಗೊಂಡ ಕಲ್ಲಾಪುರ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಜನ ದ್ವಿಚಕ್ರ ವಾಹನಗಳಲ್ಲಿ ಚೌಡ್ಲಪುರ ಗ್ರಾಮಕ್ಕೆ ತೆರಳಿ ಮನೆಗಳ ಹೆಂಚು ಒಡೆದು, ಬಾಗಿಲು ಒಡೆದು, ಬೈಕ್ ಜಖಂಗೊಳಿಸಿ, ಜಾನುವಾರುಗಳ ಮೇಲೆ ಕಡಪದ ಕಲ್ಲನ್ನು ಎಸೆದು ದಾಂಧಲೆ ನಡೆಸಿದರೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಈ ಸಮಯದಲ್ಲಿ ಎದುರಿಗೆ ಬಂದ ಜನರ ಮೇಲೂ ಹಲ್ಲೆ ನಡೆಸಿದ್ದರಿಂದ ಚೌಡ್ಲಪುರ ಗ್ರಾಮದ ದೇವರಾಜು (32), ಪವಿತ್ರಾ(28), ಸಂಜಯ್(23), ಪುಟ್ಟಸ್ವಾಮಿ (43), ಪ್ರಭಾ (48) ಅವರುಗಳು ಗಾಯಗೊಂಡಿದ್ದು, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸುದ್ದಿ ತಿಳಿದ ಕಡೂರು ಪಿಎಸ್ಐ ಸಿ.ರಾಕೇಶ್ ತಮ್ಮ ಸಿಬ್ಬಂದಿಯೊಂದಿಗೆ ತಡ ರಾತ್ರಿಯೇ ಸ್ಥಳಕ್ಕೆ ತೆರಳಿ ಗುಂಪನ್ನು ಚದುರಿಸಿದರಲ್ಲದೆ ಲಘು ಲಾಠಿ ಪ್ರಹಾರ ನಡೆಸಿದ್ದರಿಂದ ಪರಿಸ್ಥಿತಿ ತಹಬದಿಗೆ ಬಂತು.
ಇನ್ನೊಂದು ಕೋಮಿನ ಮೂವರು ಗಾಯಗೊಂಡಿದ್ದು, ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಕಲ್ಲಾಪುರ ಮತ್ತು ಚೌಡ್ಲಪುರ ಗ್ರಾಮದಲ್ಲಿ ಪೆÇೀಲಿಸರು ಮೊಕ್ಕಾಂ ಹೂಡಿದ್ದಾರೆ.
ಕಡೂರಿನಿಂದ ಯಗಟಿಪುರಕ್ಕೆ ತೆರಳುವ ಮುಖ್ಯ ಮಾರ್ಗದಲ್ಲಿ ಬರುವ ಕಲ್ಲಾಪುರ ಸದಾ ಗಿಜಿಗುಡುತ್ತಿರುತ್ತದೆ. ಆದರೆ ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ. ಅನೇಕ ಮನೆಗಳು ಬೀಗ ಹಾಕಿಕೊಂಡಿವೆ. ಅಂಗಡಿ-ಮುಗ್ಗಟ್ಟುಗಳು ತೆರೆದೇ ಇಲ್ಲ, ಎರಡೂ ಗ್ರಾಮಗಳ ಜನರು ಘಟನೆ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ಮುಂದೆ ಬರುತ್ತಿಲ್ಲ.
ಪ್ರತಿಭಟನೆ: ಘಟನೆ ಸಂಬಂಧ ಬಿಜೆಪಿ ಮಂಡಳ ಅಧ್ಯಕ್ಷ ಬೆಳ್ಳಿಪ್ರಕಾಶ್ ವೃತ್ತ ನಿರೀಕ್ಷಕರ ಕಚೇರಿಗೆ ತೆರಳಿ ಶಾಂತ ವಾತಾವರಣಕ್ಕೆ ಮನವಿ ಮಾಡಲು ಹೋದಾಗ ವೃತ್ತ ನಿರೀಕ್ಷಕರು ತಮ್ಮೊಂದಿಗೆ ಅಗೌರವದಿಂದ ವರ್ತಿಸಿದ್ದಾರೆ ಎಂದು ಬೆಳ್ಳಿಪ್ರಕಾಶ್ ಆರೋಪಿಸಿ ತಮ್ಮ ಬೆಂಬಲಿಗರೊಂದಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವೃತ್ತ ನಿರೀಕ್ಷಕರ ವಿರುದ್ಧ ಬೆಂಬಲಿಗರು ಘೋಷಣೆ ಕೂಗಿದರು. ಮಂಡಳ ಅಧ್ಯಕ್ಷ ಬೆಳ್ಳಿಪ್ರಕಾಶ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ಸ್ಥಳಕ್ಕೆ ಬಂದ ಪಿಎಸ್ಐ ರಾಕೇಶ್ ಮಧ್ಯಸ್ಥಿಕೆಯಿಂದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.