ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಹಣ, ಹೆಂಡ ಹಂಚಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಏ.6- ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಹಣ, ಹೆಂಡ ಹಂಚಿಲ್ಲ. ಮುಂದೆಯೂ ಹಂಚುವುದಿಲ್ಲ. ಇಂತಹ ಕೆಟ್ಟ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ಒಂದು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಮಾತುಕತೆ ನಡೆಸಿ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಹಿಂದೆ ನಡೆದ ಯಾವುದೇ ಚುನಾವಣೆಗಳಲ್ಲಾಗಲಿ, ಈಗಿನ ಚುನಾವಣೆಯಲ್ಲಾಗಲಿ ಹಣ, ಹೆಂಡ ಹಂಚಿಲ್ಲ. ಇಂತಹ ಕೆಟ್ಟ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ನನ್ನ ಬಳಿ ಹಣ ಇಲ್ಲ. ನಾನು ಮನೆಯಿಂದ ಹೊರ ಬರುವಾಗ ಖಾಲಿ ಜೇಬಿನಲ್ಲಿ ಬರುತ್ತೇನೆ. ಜನರೇ ಹಣ ಕೊಡುತ್ತಾರೆ ಅವರ ಹಣದಲ್ಲೇ ಈ ಬಾರಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ, ಅಂತಹ ಕೆಲಸವನ್ನು ನಾನು ಮಾಡುತ್ತಿಲ್ಲ. ಈ ಕೆಲಸವನ್ನೆಲ್ಲ ಅವರೇ ಮಾಡುವುದು. ಅದಕ್ಕಾಗಿ ಮೊದಲೇ ಹೋಗಿ ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರ ಬಿಡಲ್ಲ:
ಯಾವುದೇ ಕಾರಣಕ್ಕೂ ಚಾಮುಂಡೇಶ್ವರಿ ಕ್ಷೇತ್ರ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮುಂದೆಯೂ ನಾನು ಮುಖ್ಯಮಂತ್ರಿ ಆಗಬಾರದೆಂದು ಅಂದುಕೊಂಡಿರುವವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಬಾರಿ ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. 25 ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳಿಸುವುದಿಲ್ಲ ಎಂದು ಸಿಎಂ ತಿಳಿಸಿದರು.

ಇದನ್ನು ಯಾವ ಆಧಾರದ ಮೇಲೆ ಹೇಳುತ್ತೀರ ಎಂಬ ವರದಿಗಾರರ ಮತ್ತೊಂದು ಪ್ರಶ್ನೆಗೆ, ನಾನು ಜೆಡಿಎಸ್‍ನಲ್ಲಿ ಇದ್ದು ಬಂದವನು. ಹಾಗಾಗಿ ಅವರ ಶಕ್ತಿ ಕೇಂದ್ರಗಳು ಎಲ್ಲೆಲ್ಲಿ ಇವೆ ಎಂಬುದು ನನಗೆ ಗೊತ್ತು. ಹಾಗಾಗಿ 25ಕ್ಕಿಂತ ಹೆಚ್ಚು ಸ್ಥಾನವನ್ನು ಅವರು ಗಳಿಸಲ್ಲ ಎಂದು ಹೇಳಿದರು.

ಅದೂ ಅಲ್ಲದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ 28 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆದ್ದಿರಲಿಲ್ಲ. ಈಗ ಅವರು ಅಧಿಕಾರದಲ್ಲಿಯೂ ಇಲ್ಲ. ಹಾಗಾಗಿ 25 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಹೇಗೆ ಗೆಲ್ಲಲು ಸಾಧ್ಯ ಎಂದು ಮಾಧ್ಯಮದವರನ್ನೇ ಪ್ರಶ್ನ್ನಿಸಿದರು.
ನಿಮ್ಮ ಹಾಗೂ ನಟ ಸುದೀಪ್ ಭೇಟಿಯ ಮಹತ್ವವೇನು ಎಂದು ಸುದ್ದಿಗಾರರು ಕೇಳಿದ್ದಕ್ಕೆ, ಅವರು ಕ್ರಿಕೆಟ್ ಸರಣಿ ಹಮ್ಮಿಕೊಂಡಿದ್ದಾರೆ. ಅದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಕೋರಲು ಬಂದಿದ್ದರು. ಆ ಸಮಯದಲ್ಲಿ ಯಾವುದೇ ರಾಜಕೀಯವಾಗಲಿ, ಬೇರೆ ವಿಷಯವಾಗಲಿ ಮಾತನಾಡಲಿಲ್ಲ ಎಂದು ಸಿದ್ದರಾಮಯ್ಯ ಉತ್ತರಿಸಿದರು.

ತೈಲ ಬೆಲೆ ದಿನೇ ದಿನೇ ಏರುತ್ತಿದೆಯಲ್ಲ ಎಂಬ ಇನ್ನೊಂದು ಪ್ರಶ್ನೆಗೆ, ಕಚ್ಛಾ ತೈಲದ ಬೆಲೆ 130 ಡಾಲರ್ ಇದ್ದಾಗಲೂ ಲೀಟರ್ 70ರೂ. ಇತ್ತು. ಈಗ 50 ಡಾಲರ್ ಆಗಿದ್ದರೂ 70ರೂ.ನೇ ಇದೆ. ಇದನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಬೇಕೆ ಹೊರತು ನಾವಲ್ಲ ಎಂದು ಹೇಳಿದರು.
ನಾನು ರಾಜ್ಯದಲ್ಲಿ ತೈಲ ಬೆಲೆಯಲ್ಲಿ ಹೆಚ್ಚಳ ಮಾಡಿಲ್ಲ ಎಂದು ತಿಳಿಸಿದರು.
ಸಿದ್ದರಾಮ್ಯ ಅವರೊಂದಿಗೆ ಅವರ ಪುತ್ರ ಡಾ.ಯತೀಂದ್ರ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ