ಕೃಷ್ಣಮೃಗ ಭೇಟೆ ಪ್ರಕರಣ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ 5 ವರ್ಷ ಜೈಲುಶಿಕ್ಷೆ :ಉಳಿದ ಆರೋಪಿಗಳ ಖುಲಾಸೆ

ಜೋಧ್ಪುರ:ಏ-5: ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿರುವ ರಾಜಸ್ತಾನದ ಜೋಧ್ಪುರ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಈ ಮೂಲಕ 20 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಲ್ಮಾನ್ ತಪ್ಪಿತಸ್ಥರಾಗಿದ್ದು, ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಸುದೀರ್ಘ ಎರಡು ದಶಕಗಳ ಕಾಲ ವಿಚಾರಣೆ ನಡೆಸಿದ ಜೋಧ್ಪುರ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ ಸಲ್ಮಾನ್ ಖಾನ್ ಅವರನ್ನು ಮುಖ್ಯ ನ್ಯಾಯಮೂರ್ತಿ ದೇವ್ ಕುಮಾರ್ ಖಾತ್ರಿ ಅವರು ದೋಷಿ ಎಂದು ತೀರ್ಪು ನೀಡಿದ್ದು, ಐದು ವರ್ಷ ಜೈಲು ಶಿಕ್ಷೆ ಜತೆಗೆ 10 ಸಾವಿರ ರೂ. ದಂಡ ವಿಧಿಸಿದ್ದಾರೆ.


ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದಿದ್ದ ಬೇಟೆ ಪ್ರಕರಣ ಇದಾಗಿದ್ದು, ಸಲ್ಮಾನ್ ಮಾತ್ರವೇ ಅಲ್ಲದೇ, ಸೈಪ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರ, ನೀಲಂ ಕೂಡ ಆರೋಪಿಗಳಾಗಿದ್ದಾರೆ. ಎಲ್ಲಾ ಆರೋಪಿಗಳು ಇಂದು ಜೋಧ್ಪುರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಇದರಂತೆ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದು, ಇತರೆ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಚಿತ್ರೀಕರಣಕ್ಕೆಂದು ರಾಜಸ್ತಾನದಲ್ಲಿ ತಂಗಿದ್ದ ಸಲ್ಮಾನ್ ಖಾನ್ ಹಾಗೂ ಇತರೆ ಆರೋಪಿಗಳು 1998ರ ಅ.1 ಹಾಗೂ 2 ರ ನಡುವಣ ರಾತ್ರಿ ಜೋಧ್ಪುರ ಬಳಿಯ ಕಂಕಣಿ ಗ್ರಾಮದಲ್ಲಿ ಜಿಪ್ಸಿಯಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರ ಕಣ್ಣಿಗೆ ಕೃಷ್ಣಮೃಗಗಳ ಹಿಂಡು ಕಾಣಿಸಿತ್ತು. ಚಾಲಕನ ಸೀಟಿನಲ್ಲಿ ಕುಳಿತಿದ್ದ ಸಲ್ಮಾನ್ ಆ ಹಿಂಡಿನತ್ತ ಗುಂಡು ಹಾರಿಸಿದ್ದರು. ಈ ವೇಳೆ 2 ಕೃಷ್ಣಮೃಗಗಳು ಮೃತಪಟ್ಟಿದ್ದವು. ಇದನ್ನು ಸಾರ್ವಜನಿಕರು ಗಮನಿಸಿ, ಬೆನ್ನಟ್ಟಿದಾಗ, ಮೃತ ಕೃಷ್ಣಮೃಗಗಳನ್ನು ಅಲ್ಲಿಯೇ ಬಿಟ್ಟು ಸಲ್ಮಾನ್ ಮತ್ತು ತಂಡ ಸ್ಥಳದಿಂದ ಪರಾರಿಯಾಗಿತ್ತು ಎಂದು ಹೇಳಲಾಗಿತ್ತು.

ಇನ್ನು ಜೋರ್ಧ್ಪುರ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಲ್ಲು ಪರ ವಕೀಲರು ನಿರ್ಧಾರ ಮಾಡಿದ್ದಾರೆ.

Salman Khan,Blackbuck poaching case,5-year jail term

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ