ಕೇಂದ್ರ ಸರ್ಕಾರಕ್ಕೆ ಆರ್‍ಬಿಐನಂತಹ ಸಂಸ್ಥೆಗಳ ಮೇಲೆ ಗೌರವ ಇಲ್ಲ : ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ

ದಾವಣಗೆರೆ, ಏ.4-ಕೇಂದ್ರ ಸರ್ಕಾರಕ್ಕೆ ಆರ್‍ಬಿಐನಂತಹ ಸಂಸ್ಥೆಗಳ ಮೇಲೆ ಗೌರವ ಇಲ್ಲದಿರುವುದರಿಂದ ಇವರ ಸುತ್ತಮುತ್ತಲಿರುವ ಉದ್ಯಮಿಗಳು ಸಾವಿರಾರು ಕೋಟಿಯನ್ನು ದುರುಪಯೋಗಪಡಿಸಿಕೊಂಡು ವಿದೇಶಕ್ಕೆ ಪರಾರಿಯಾಗುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಮುಂದೆ ಬ್ಯಾಂಕಿಂಗ್ ಕ್ಷೇತ್ರ ಯಾವ ಸ್ಥಿತಿಗೆ ತಲುಪಬಹುದು ಎಂಬ ಆತಂಕ ಕಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದ್ದಾರೆ.

ದಾವಣಗೆರೆಯ ಬಾಪೂಜಿ ಕಾಲೇಜು ಸಭಾಂಗಣದಲ್ಲಿಂದು ವರ್ತಕರ ಜೊತೆ ಸಮಾಲೋಚನೆ ನಡೆಸಿದ ರಾಹುಲ್‍ಗಾಂಧಿ ಅವರಿಗೆ ಉದ್ಯಮಿಯೊಬ್ಬರು ಪ್ರಶ್ನೆ ಕೇಳಿ, ನೀರವ್ ಮೋದಿಯಂತಹ ಉದ್ಯಮಿಗಳು ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದಾಗ ಸುದೀರ್ಘಉತ್ತರ ನೀಡಿದ ರಾಹುಲ್‍ಗಾಂಧಿ, ಕೇಂದ್ರ ಸರ್ಕಾರಕ್ಕೆ ಆರ್‍ಬಿಐ ಮೇಲಾಗಲಿ, ನ್ಯಾಯಾಂಗದ ಮೇಲಾಗಲಿ ಗೌರವ ಇಲ್ಲ. ಹೀಗಾಗಿ ಅವರ ಸುತ್ತಮುತ್ತ ಇರುವವರು ಬ್ಯಾಂಕಿಂಗ್ ಕ್ಷೇತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಮುಂದೆ ಎಂತಹ ದುಃಸ್ಥಿತಿ ಬರಲಿದೆಯೋ ಗೊತ್ತಿಲ್ಲ. ಬ್ಯಾಂಕಿಂಗ್ ಕ್ಷೇತ್ರ ಏನಾಗುವುದೋ ಎಂದು ಹೇಳಲಾಗುವುದಿಲ್ಲ ಎಂದರು.

ಪ್ರಮುಖ ಸಂಸ್ಥೆಗಳ ಮೇಲೆ ಒಮ್ಮೆ ದಾಳಿ ಆರಂಭಿಸಿದರೆ ಅದು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಆರ್‍ಬಿಐ ಮೇಲೆ ಕೇಂದ್ರ ಸರ್ಕಾರ ಸವಾರಿ ಮಾಡಿದೆ. ನೋಟು ಅಮಾನಿಕರಣ ವಿಷಯದಲ್ಲಿ ಆರ್‍ಬಿಐ ಅಭಿಪ್ರಾಯ ಕಡೆಗಣಿಸಲಾಗಿತ್ತು. ಇನ್ನು ನ್ಯಾಯಾಂಗದ ಮೇಲೂ ಕೇಂದ್ರ ಸರ್ಕಾರಕ್ಕೆ ಗೌರವ ಇಲ್ಲ. ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳೇ ನ್ಯಾಯಕ್ಕಾಗಿ ಜನರ ಮುಂದೆ ಬಂದಿದ್ದರು ಎಂದು ಹೇಳಿದರು.

ದೇಶ ಹಲವಾರು ಸಂಸ್ಥೆಗಳ ಏಕೀಕೃತ ವ್ಯವಸ್ಥೆ ಯಾವುದೇ ಸಂಸ್ಥೆಯನ್ನು ಹಾಳು ಮಾಡಬಾರದು. ಕಾಂಗ್ರೆಸ್ ಎಲ್ಲಾ ಸಂಸ್ಥೆಗಳ ಅಭ್ಯುದಯದಲ್ಲಿ ನಂಬಿಕೆ ಹೊಂದಿದೆ. ಆದರೆ ಬಿಜೆಪಿ ಇದಕ್ಕೆ ತದ್ವಿರುದ್ಧ. ಆರ್‍ಎಸ್‍ಎಸ್ ಎಂಬ ಒಂದು ಸಂಘಟನೆಯಿಂದ ದೇಶ ನಡೆಸಲಾಗುತ್ತಿದೆ. ಆರ್‍ಎಸ್‍ಎಸ್‍ನ ಒಂದೇ ರೀತಿಯ ಆಲೋಚನೆಯನ್ನು ದೇಶದ ಮೇಲೆ ಹೇರಲಾಗುತ್ತಿದೆ ಎಂದು ಆರೋಪಿಸಿದರು.

ಇಂದು ದೇಶವನ್ನು ಕಾಡುತ್ತಿರುವುದು ನಿರುದ್ಯೋಗ ಮತ್ತು ರೈತರ ಆತ್ಮಹತ್ಯೆ ಸಮಸ್ಯೆಗಳು. ಯುವಕರು ಸಕ್ರಿಯವಾಗಿ ತೊಡಗಿಸಿಕೊಂಡರೆ ದೇಶವಷ್ಟೇ ಅಲ್ಲ, ವಿಶ್ವವನ್ನೇ ಬದಲಿಸಲು ಸಾಧ್ಯ. ಹಲವಾರು ಗಂಭೀರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಭಾರತದಲ್ಲಿ ನಡೆದಿರುವ ಕ್ಷೀರಕ್ರಾಂತಿ, ಹಸಿರುಕ್ರಾಂತಿ ಮತ್ತು ದೂರಸಂಪರ್ಕ ಕ್ರಾಂತಿಗೆ ಯುವಕರೇ ಕಾರಣ. ಮೇಕ್ ಇನ್ ಇಂಡಿಯಾ, ಕೃಷಿ, ಆರೋಗ್ಯ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಯುವಕರು ಹೊಸ ಆಲೋಚನೆಗಳೊಂದಿಗೆ ಮುಂದೆ ಬರಬೇಕು ಎಂದು ಮನವಿ ಮಾಡಿದ ಅವರು, ದೇಶದಲ್ಲಿ ಯುವಜನರ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ದೇಶದಲ್ಲಿ ತಾವೊಬ್ಬರೇ ಎಲ್ಲವನ್ನು ಮಾಡುವ ಭ್ರಮೆಯಿಂದ ಆಡಳಿತ ನಡೆಸುತ್ತಿದ್ದಾರೆ. ಅನುಭವಿಗಳ ಸಲಹೆ ಕೇಳುತ್ತಿಲ್ಲ, ಪ್ರಮುಖ ಸಂಸ್ಥೆಗಳನ್ನು ನಿರ್ಲಕ್ಷಿಸಿದ್ದಾರೆ. ಬೇರೆ ಯಾರೋ ಏಕೆ ಖುದ್ದಾಗಿ ಅವರದೇ ಪಕ್ಷದ ಹಿರಿಯರಾದ ಎಲ್.ಕೆ.ಅಡ್ವಾಣಿ ಅವರ ಮಾತನ್ನು ನರೇಂದ್ರ ಮೋದಿ ಕೇಳುತ್ತಿಲ್ಲ. ಬಾಂಬೆ ದಾಳಿ ಸೇರಿದಂತೆ ಪ್ರಮುಖ ಘಟನೆಗಳಲ್ಲಿ ಅಡ್ವಾಣಿ ಮಾತನಾಡಿದ್ದಾರೆ. ಅವರು ಒಂದು ವರ್ಗದ ಜನರನ್ನು ಪ್ರತಿನಿಧಿಸುತ್ತಾರೆ. ಮೋದಿಯವರು ಈವರೆಗೂ ಎಷ್ಟು ಬಾರಿ ಅಡ್ವಾಣಿಯವರೊಂದಿಗೆ ಚರ್ಚೆ ನಡೆಸಿ ಸಲಹೆ ಪಡೆದಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದರು.

ನೋಟು ಅಮಾನೀಕರಣದ ನಂತರ ಕಪ್ಪು ಹಣ ಅಧಿಕೃತ ಮಾಡಿಕೊಡುವ ವ್ಯವಸ್ಥಿತ ವ್ಯವಹಾರ ನಡೆಯುತ್ತಿದೆ. ಸುಮಾರು ಒಂದು ಮಿಲಿಯನ್ ನೋಟೀಸ್‍ಗಳನ್ನು ಆದಾಯ ತೆರಿಗೆ ಇಲಾಖೆ ನೀಡಿದೆ. ಆದರೆ ಅಲ್ಲಿ ತಪ್ಪಿತಸ್ಥರಿಗೆ ಯಾವುದೇ ಕ್ರಮಕೈಗೊಂಡಿಲ್ಲ, ಬದಲಾಗಿ ಶ್ರೀಮಂತರ ಕಪ್ಪು ಹಣವನ್ನು ಅಧಿಕೃತ ಮಾಡಿಕೊಡಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗಬ್ಬರ್‍ಸಿಂಗ್ ಟ್ಯಾಕ್ಸ್ ಆಗಿರುವ ಜಿಎಸ್‍ಟಿಯನ್ನು ಸರಳೀಕರಿಸಲಾಗುವುದು. ಬಡವರಿಗೆ ಕೈಗೆಟುಕುವ ಪ್ರಮಾಣದಲ್ಲಿ ತೆರಿಗೆಯನ್ನು ಪರಿಷ್ಕರಿಸಿ ದೇಶಾದ್ಯಂತ ಒಂದೇ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಗುವುದು. ಈ ಮೊದಲು ಯುಪಿಎ ಸರ್ಕಾರ ಜಿಎಸ್‍ಟಿಯನ್ನು ಪ್ರಸ್ತಾಪಿಸಿದಾಗ ಮುಖ್ಯಮಂತ್ರಿಯಾಗಿದ್ದಾಗ ಮೋದಿ ವಿರೋಧ ವ್ಯಕ್ತಪಡಿಸಿದ್ದರು. ಈಗ ಅವರು ಜಿಎಸ್‍ಟಿ ಜಾರಿಗೆ ತಂದರೂ ಕೂಡ ಜನರಿಗೆ ಹೊರೆಯಾಗಿದೆ ಎಂದು ದೂರಿದರು.
ಉದ್ಯಮಗಳ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸಿದೆ. ಪ್ರಧಾನಮಂತ್ರಿ ಮೋದಿ ಮತ್ತು ಹಣಕಾಸು ಸಚಿವ ಅರುಣ್‍ಜೇಟ್ಲಿ ತಲುಪಲು ಅವಕಾಶವಿರುವ 15 ರಿಂದ 20 ಮಂದಿ ಉದ್ಯಮಿಗಳು ಮಾತ್ರ ಅಭಿವೃದ್ಧಿ ಹೊಂದುತ್ತಿದ್ದಾರೆ. ಮೋದಿ ಮತ್ತು ಅರುಣ್ ಜೇಟ್ಲಿಯವರನ್ನು ತಲುಪಲು ಸಾಧ್ಯವಾಗದವರು ವ್ಯವಸ್ಥೆ ಬಗ್ಗೆ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.

ಯುವಕರಿಗೆ ಉದ್ಯೋಗ ಸೃಷ್ಟಿಯಲ್ಲೂ ಕೇಂದ್ರ ಸರ್ಕಾರ ತನ್ನ ಭರವಸೆ ಈಡೇರಿಸಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ತನ್ನ ತಪ್ಪು ತಿದ್ದುಕೊಳ್ಳುತ್ತಿಲ್ಲ ಎಂದು ರಾಹುಲ್ ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ, ನೀರವ್‍ಮೋದಿ, ವಿಜಯ್‍ಮಲ್ಯರಂತಹ ಉದ್ಯಮಿಗಳಿಗೆ ಬಾಗಿಲು ತೆರೆದಿಟ್ಟಿದ್ದಾರೆ. ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅವಕಾಶದ ಬಾಗಿಲು ಮುಚ್ಚಿದ್ದಾರೆ ಎಂದು ರಾಹುಲ್‍ಗಾಂಧಿ ಆರೋಪಿಸಿದರು.

ಮೇಕ್ ಇನ್ ಇಂಡಿಯಾ ಎಂದು ಮೋದಿ ಹೇಳುತ್ತಿರುವುದು ಕೇವಲ ಬೂಟಾಟಿಕೆ. ಚೀನಾ ಕೌಶಲ್ಯಯುತ ಸಿಬ್ಬಂದಿಗಳನ್ನು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಜೋಡಿಸಿ ಮೇಕ್ ಇನ್ ಚೀನಾ ಆರಂಭಿಸಿದ್ದರಿಂದಾಗಿ ಇಂದು ಅಭಿವೃದ್ಧಿಯತ್ತ ಮುನ್ನಡೆದಿದೆ. ಆದರೆ ನಮ್ಮಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜೋಡಿಸಿಲ್ಲ, ಕೌಶಲ್ಯಭರಿತ ಸಿಬ್ಬಂದಿಯನ್ನೂ ಒದಗಿಸಿಲ್ಲ. ಹೆಸರಿಗೆ ಮಾತ್ರ ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ರಫಾಯಲ್ ವಿಮಾನದ ಗುತ್ತಿಗೆಯನ್ನು ಅನಿಲ್ ಅಂಬಾನಿಯಂತಹ ಉದ್ಯಮಿಗಳಿಗೆ ಕೊಡುತ್ತಿದ್ದಾರೆ. ಇದರಿಂದ ಅನಿಲ್ ಅಂಬಾನಿಯವರ ಕಂಪೆನಿಗೆ ಎಷ್ಟು ಕೋಟಿ ಲಾಭವಿದೆ ಎಂಬುದು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಮೋದಿ ಮಾಡುತ್ತಿರುವ ನೀತಿಗಳು ಜನವಿರೋಧಿಯಾಗಿದ್ದು, ದೇಶವನ್ನು ಹಾಳು ಮಾಡುತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ