ಎಐಸಿಸಿ ಆಧ್ಯಕ್ಷ ರಾಹುಲ್ ಗಾಂಧಿ ಜನಸಾಮಾನ್ಯರಂತೆ ಖಾಸಗಿ ಹೋಟೆಲ್‍ಗೆ ಹೋಗಿ ಬೆಣ್ಣೆ ರುಚಿಯ ಸವಿ ಸವಿದರು

ದಾವಣಗೆರೆ, ಏ.4- ಎಐಸಿಸಿ ಆಧ್ಯಕ್ಷ ರಾಹುಲ್ ಗಾಂಧಿ ಇಂದು ದಾವಣಗೆರೆಯಲ್ಲಿ ಜನಸಾಮಾನ್ಯರಂತೆ ಖಾಸಗಿ ಹೋಟೆಲ್‍ಗೆ ಹೋಗಿ ಬೆಣ್ಣೆ ರುಚಿಯ ಸವಿ ಸವಿದರು.
ರಾಜ್ಯ ಪ್ರವಾಸದಲ್ಲಿರುವ ರಾಹುಲ್‍ಗಾಂಧಿ ಅವರು ಸಮಯ ಸಿಕ್ಕಾಗಲೆಲ್ಲಾ ಸಣ್ಣಪುಟ್ಟ ಹೋಟೆಲ್‍ಗಳಿಗೆ ಹೋಗಿ ಸ್ಥಳೀಯವಾಗಿ ಸಿಗುವ ತಿಂಡಿ ತಿನಿಸುಗಳನ್ನು ಸವಿಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಮೊದಲು ಮುಂಬೈ ಕರ್ನಾಟಕ ಭಾಗದ ಪ್ರವಾಸದ ವೇಳೆ ರಾಯಚೂರು ಬಳಿಯ ಹಳ್ಳಿಯೊಂದರಲ್ಲಿನ ಗುಡಿಸಲು ಹೋಟೆಲ್‍ಗೆ ಹೋಗಿ ಮಂಡಕ್ಕಿ, ಬಜ್ಜಿ ತಿಂದು ಚಹಾ ಸೇವಿಸಿದ್ದರು. ಮಂಗಳೂರು ಪ್ರವಾಸದ ವೇಳೆಯೂ ಸಾಮಾನ್ಯರ ಹೋಟೆಲ್‍ನಲ್ಲಿ ಮೀನಿನ ರುಚಿ ನೋಡಿದ್ದರು.

ದಾವಣಗೆರೆಯ ಬಾಪೂಜಿ ಸಭಾಂಗಣದಲ್ಲಿ ಉದ್ದಿಮೆದಾರರೊಂದಿಗಿನ ಸಮಾವೇಶದಲ್ಲಿ ಭಾಗವಹಿಸಿ ತೆರಳುವ ಮುನ್ನಾ ವಿಜಿ ಬೆಣ್ಣೆ ದೋಸೆ ಹೋಟೆಲ್‍ಗೆ ತೆರಳಿ, ಜನ ಸಾಮಾನ್ಯರ ನಡುವೆ ನಿಂತು ಬೆಣ್ಣೆ ದೋಸೆ ತಿಂದರು. ನಂತರ ಚಹಾ ಕುಡಿಯುತ್ತಾ ಹೋಟೇಲ್‍ಗೆ ಬಂದಿದ್ದವರೊಂದಿಗೆ ಉಭಯ ಕುಶಲೋಪರಿ ನಡೆಸಿದರು.
ವಿಜಿ ಬೆಣ್ಣೆ ದೋಸೆ ರುಚಿಗೆ ಹೆಚ್ಚು ಜನಪ್ರಿಯವಾಗಿರುವುದನ್ನು ಸಚಿವರೊಬ್ಬರ ಪುತ್ರ ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ಮಧ್ಯಾಹ್ನ ಊಟಕ್ಕೆ ದೋಸೆ ತಿಂದು ಚಹಾ ಕುಡಿದು ರಾಹುಲ್ ಚಿತ್ರದುರ್ಗದ ಹೋಳಲ್ಕೆರೆಗೆ ಪ್ರಯಾಣ ಬೆಳೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತಿತರರು ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಜೊತೆಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ