ವೀರಶೈವ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ, ಏ.4-ಸಮುದಾಯದಿಂದ ಬೇಡಿಕೆಗಳು ಬಂದ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ದಾವಣಗೆರೆಯಲ್ಲಿಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ವರ್ತಕರೊಂದಿಗೆ ಸಮಾಲೋಚನೆ ನಡೆಸುವ ವೇಳೆ ಯುವತಿಯೊಬ್ಬರು, ಪ್ರತ್ಯೇಕ ಲಿಂಗಾಯತ ವೀರಶೈವ ಧರ್ಮದ ಕುರಿತು ಪ್ರಶ್ನೆ ಕೇಳಿದರು. ಇದಕ್ಕೆ ರಾಜ್ಯದ ನಾಯಕರೇ ಉತ್ತರ ನೀಡುತ್ತಾರೆ ಎಂದು ರಾಹುಲ್‍ಗಾಂಧಿ ಮೈಕನ್ನು ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು.

ಆಗ ಉತ್ತರ ನೀಡಿದ ಸಿದ್ದರಾಮಯ್ಯ ಅವರು, ವೀರಶೈವ ಲಿಂಗಾಯತ ಧರ್ಮಕ್ಕಾಗಿ ಸರ್ಕಾರ ಏಕಾಏಕಿ ನಿರ್ಧಾರ ಮಾಡಿಲ್ಲ. ಮಾತೆ ಮಹಾದೇವಿಯವರು ಬೀದರ್‍ನಲ್ಲಿ ಕಾರ್ಯಕ್ರಮ ಮಾಡಿ ಪ್ರತ್ಯೇಕ ಧರ್ಮಕ್ಕೆ ಮನವಿ ನೀಡಿದ್ದರು. ಆರು ತಿಂಗಳ ಹಿಂದೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನನ್ನನ್ನು ಅಭಿನಂದಿಸಲು ಬೆಂಗಳೂರಿನಲ್ಲೊಂದು ಕಾರ್ಯಕ್ರಮ ಆಯೋಜಿಸಿದ್ದರು. ಆಗ ವೀರಶೈವ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವಂತೆ ಮನವಿ ನೀಡಿದರು.

ಈ ವಿಷಯವಾಗಿ ಸುಮಾರು ಐದು ಅರ್ಜಿಗಳು ಸರ್ಕಾರಕ್ಕೆ ಬಂದವು. ಅವುಗಳನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ರವಾನಿಸಲಾಗಿತ್ತು. ಆಯೋಗ ನಾಗಮೋಹನ್‍ದಾಸ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ನೀಡಿದ ವರದಿ ಆಧರಿಸಿ ಸಂಪುಟದಲ್ಲಿ ಚರ್ಚೆ ಮಾಡಿ ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಶಾಮನೂರು ಶಿವಶಂಕರಪ್ಪ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಕೆಲವರು ಸಭೆಯಲ್ಲಿ ಗದ್ದಲ ಆರಂಭಿಸಿದರು. ಆಗ ಅವರನ್ನು ಸಮಾಧಾನ ಮಾಡಿದ ಮುಖ್ಯಮಂತ್ರಿಗಳು, ಮೊದಲು ನನ್ನ ಮಾತು ಕೇಳಿ, ಮಾತನಾಡಲು ಅವಕಾಶ ಕೊಡಿ. ನಂತರ ನಿಮ್ಮ ಅಭಿಪ್ರಾಯ ಹೇಳಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ