ಶ್ರೀರಾಮ ಸೇನೆಯ ಶಿವಸೇನೆಯೊಂದಿಗೆ ಸಖ್ಯ ಬೆಳೆಸಿದ್ದು ರಾಜ್ಯದ 60 ಕ್ಷೇತ್ರಗಳಲ್ಲಿ ಶಿವಸೇನೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು : ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್

ಚಿಕ್ಕಮಗಳೂರು, ಏ.4-ಶ್ರೀರಾಮ ಸೇನೆಯ ಶಿವಸೇನೆಯೊಂದಿಗೆ ಸಖ್ಯ ಬೆಳೆಸಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 60 ಕ್ಷೇತ್ರಗಳಲ್ಲಿ ಶಿವಸೇನೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 60 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಮುಂಬೈ ಶಿವಸೇನೆಯ ಕೇಂದ್ರ ಕಚೇರಿಗೆ ಪಟ್ಟಿ ಕಳುಹಿಸಲಾಗಿದೆ. ಶಿವಸೇನೆಯ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಸಿದ್ದಲಿಂಗ ಸ್ವಾಮೀಜಿ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. ನಾನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಅಥವಾ ದರ್ಗಾಳ ಕ್ಷೇತ್ರದ ಪೈಕಿವೊಂದರಲ್ಲಿ ಕಣಕ್ಕಿಳಿಯಲಿದ್ದೇನೆ ಎಂದು ಮಾಹಿತಿ ನೀಡಿದರು.

ಗೋರಕ್ಷೆ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ನೈತಿಕ ಹಕ್ಕು ಇಲ್ಲ. ಗೋಮಾಂಸ ರಫ್ತಿನಲ್ಲಿ ಭಾರತವು 3ನೇ ಸ್ಥಾನದಲ್ಲಿದೆ. ಅದನ್ನು ನಿಲ್ಲಿಸಿದರೆ ಗೋಹತ್ಯೆ ತಾನಾಗಿಯೇ ನಿಲ್ಲುತ್ತದೆ. ಕೇಂದ್ರ ಸರ್ಕಾರ ಬೂಟಾಟಿಕೆ ರಾಜಕೀಯ ಮಾಡುತ್ತಿದೆ ಎಂದರು.

ಬಿಜೆಪಿ ರಾಜಕೀಯ ಸ್ವಾರ್ಥಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ. ಆದರೆ ನಾವು ಹಿಂದುತ್ವಕ್ಕಾಗಿಯೇ ರಾಜಕೀಯ ಪ್ರವೇಶ ಮಾಡುತ್ತಿದ್ದೇವೆ ಎಂದರು.
ಜಿಲ್ಲೆಯಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಕ್ಷೇತ್ರದಲ್ಲಿ ಶಿವಸೇನೆಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.

ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ, ಮುಖಂಡರಾದ ಮಹೇಶ್‍ಕುಮಾರ್, ರಂಜಿತ್‍ಶೆಟ್ಟಿ, ಶಿವಕುಮಾರ್‍ರೆಡ್ಡಿ, ಶಾರದಮ್ಮ ಮೊದಲಾದವರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ