ಮೈಸೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಏ.1 ರಿಂದ ನಗದು ರಹಿತ ಆಡಳಿತ ವ್ಯವಸ್ಥೆ

ಮೈಸೂರು, ಏ.4-ಮೈಸೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಏ.1 ರಿಂದ ನಗದು ರಹಿತ ಆಡಳಿತ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಪಾಲಿಕೆ ಆಯುಕ್ತ ಜಗದೀಶ್ ತಿಳಿಸಿದ್ದಾರೆ.

ರಾಜ್ಯ ಪೌರಾಡಳಿತ ನಿರ್ದೇಶನಾಲಯ ರಾಜ್ಯದಲ್ಲಿ 274 ಸ್ಥಳೀಯ ಸಂಸ್ಥೆಗಳಲ್ಲಿ ನಗದು ರಹಿತ ಸ್ವೀಕೃತಿ ವ್ಯವಸ್ಥೆ ಜಾರಿಗೊಳಿಸಬೇಕೆಂದು ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಖಜಾನೆ 2 ಎಂಬ ತಂತ್ರಾಂಶ ಬಳಸಿ ನಗದು ರಹಿತ ಆಡಳಿತವನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರು ನಗರ ಪಾಲಿಕೆಯಲ್ಲಿ ಏ.1ರಿಂದ ಯಾವುದೇ ನಗದು, ಡಿಡಿ ಹಾಗೂ ಚೆಕ್‍ಗಳನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಇ-ಪಾವತಿ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕವನ್ನು ಪಾಲಿಕೆಗೆ ಭರಿಸಬೇಕೆಂದು ತಿಳಿಸಿದ್ದಾರೆ.

ಸಾರ್ವಜನಿಕರು ನೇರವಾಗಿ ಎಸ್‍ಬಿಐ, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ಗಳಲ್ಲಿ ಚೆಕ್ ಅಥವಾ ನಗದು ರೂಪದಲ್ಲಿ ಹಣ ಪಾವತಿಸಬಹುದು.

ಹಾಗೆಯೇ ಬ್ಯಾಂಕ್ ಆಫ್ ಬರೋಡಾ, ಆ್ಯಕ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಸ್‍ಬಿಐ ದೇನಾ ಬ್ಯಾಂಕ್, ಎಚ್‍ಡಿಎಫ್‍ಸಿ, ಐಸಿಐಸಿಐ, ಇಂಡಿಯನ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಇ-ಪಾವತಿ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಬಹುದೆಂದು ಅವರು ತಿಳಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿಗಳಲ್ಲಿ ಗಣಕೀಕೃತ ಚಲನ್ ಪಡೆದು ಯಾವುದೇ ಬ್ಯಾಂಕ್ ಶಾಖೆಗಳಲ್ಲಿ ಹಣ ಪಾವತಿಸಿ ಸ್ವೀಕೃತಿ ಪುರಾವೆಗಾಗಿ ಹಣ ಸಂದಾಯದ ಒಂದು ಚಲನ್ ಭಾಗವನ್ನು ಬ್ಯಾಂಕ್‍ನಲ್ಲಿ ಪಡೆಯಬಹುದಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ