ಎಸ್ಸಿ-ಎಸ್ಟಿ ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲನೆಗೆ ಒತ್ತಾಯಿಸಿ ಪ್ರತಿಭಟನೆ

ಬೆಂಗಳೂರು, ಏ.4-ಸುಪ್ರೀಂಕೋರ್ಟ್ ಎಸ್ಸಿ-ಎಸ್ಟಿ ಮೀಸಲಾತಿ ಬಗ್ಗೆ ನೀಡಿರುವ ತೀರ್ಪನ್ನು ಪುನರ್ ಪರಿಶೀಲನೆ ಮಾಡಿ ಹಿಂಬಡ್ತಿ ಮಾಡದಂತೆ ಒತ್ತಾಯಿಸಿ ನಾಳೆ 10 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಛಲವಾದಿ ಮಠದ ಶ್ರೀ ಬಸವರಾಜ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ದೌರ್ಜನ್ಯ ಕಾಯ್ದೆ ಮತ್ತು ಬಡ್ತಿ ಮೀಸಲಾತಿ ಬಗ್ಗೆ ಸುಪ್ರೀಂಕೋಟ್ ್ ನೀಡಿರುವ ತೀರ್ಪಿನ ಬಗ್ಗೆ ಪುನರ್ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಎಸ್ಸಿ-ಎಸ್ಟಿ ನೌಕರರಿಗೆ ಹಿಂಬಡ್ತಿ ಮಾಡಬಾರದೆಂದು ಒತ್ತಾಯಿಸಿದರು.

ಸುಪ್ರೀಂಕೋರ್ಟ್ ಕಳೆದ ವರ್ಷ ಬಡ್ತಿ ಮೀಸಲಾತಿ ಹಿನ್ನೆಲೆಯಲ್ಲಿ ನೀಡಿರುವತೀರ್ಪಿನಲ್ಲಿ ಎಲ್ಲಾ ಎಸ್ಸಿ-ಎಸ್ಟಿ ನೌಕರರಿಗೆ ಹಿಂಬಡ್ತಿ ಮಾಡಿ ಎಂದು ಹೇಳಿಲ್ಲ. ಜೇಷ್ಠತೆ ಪಟ್ಟಿ ಪರಿಷ್ಕರಿಸಲು ಹೇಳಿದೆ. ಇದನ್ನು ಡಿಪಿಎಆರ್‍ಇಲಾಖೆ ಸರಿಯಾಗಿ ಅರ್ಥ ಮಾಡಿಕೊಳ್ಳದೇ ತರಾತುರಿಯಲ್ಲಿ ಹಿಂಬಡ್ತಿ ಮಾಡಲು ಹೊರಟಿರುವುದನ್ನು ನಾವು ಖಂಡಿಸುತ್ತೇವೆ ಎಂದರು.

ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಮಾತನಾಡಿ, ದಲಿತರಿಗೆ ಸರ್ಕಾರ ಸಂವಿಧಾನ ಬದ್ಧ ಮೂಲಭೂತ ಹಕ್ಕುಗಳನ್ನು ನೀಡುತ್ತಿರುವುದು ಕೆಲವರಿಗೆ ನುಂಗಲಾರದ ತುತ್ತಾಗಿದೆ. ಸಾಮಾಜಿಕ ನ್ಯಾಯದಡಿ ಎಸ್ಸಿ-ಎಸ್ಟಿ ನೌಕರರ ಹಿತ ಕಾಯಲು ಸುಗ್ರೀವಾಜ್ಞೆ ಮೂಲಕ ಮಸೂದೆ ಮಂಡಿಸಿ ಒಕ್ಕೂಟದಿಂದ ತೀರ್ಮಾನಿಸಿ ಕಾಯ್ದೆಯನ್ನು ಸರ್ಕಾರ ರಾಜ್ಯಪಾಲರಿಗೆ ಸಹಿ ಮಾಡಲು ಕಳುಹಿಸಿದರೆ ರಾಜ್ಯಪಾಲರು ಸಹಿ ಮಾಡದೇ ದಲಿತ ವಿರೋಧಿ ನೀತಿಯನ್ನು ಅನುಸರಿಸಿ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿರುವುದು ಸರಿಯಲ್ಲ. ಈ ಮಸೂದೆಗೆ ರಾಷ್ಟ್ರಪತಿಯವರು ಸಹಿ ಹಾಕಿ ಕಳುಹಿಸುವವರೆಗೂ ಸರ್ಕಾರ ಯಾವುದೇ ಕಾರಣಕ್ಕೂ ದಲಿತ ನೌಕರರಿಗೆ ಹಿಂಬಡ್ತಿ ಮಾಡಬಾರದು ಎಂದು ಮನವಿ ಮಾಡಿದರು.

ಹಿಂಬಡ್ತಿ ಮಾಡಿದ್ದೇ ಆದಲ್ಲಿ ತೀವ್ರ ಹೋರಾಟ ಮಾಡುತ್ತೇವೆ. ಸರ್ಕಾರವನ್ನು ಎಚ್ಚರಿಸಲು ನಾಳೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ, ರಾಜ್ಯ ಸಂಯೋಜಕ ಮುನಿಸ್ವಾಮಿ ಮುಂತಾದವರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ