ಚುನಾವಣೆಯಲ್ಲಿ ಹಿಂದುಳಿದ ಸಮುದಾಯವಾದ ಅಂಬಿಗ, ಬೆಸ್ತ ಸಮುದಾಯದವರಿಗೆ 18 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು: ಅಂಬಿಗರ ಚೌಡಯ್ಯ ಮಹಾಸಭಾ ಒತ್ತಾಯ

ಬೆಂಗಳೂರು,ಏ.4-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ಸಮುದಾಯವಾದ ಅಂಬಿಗ, ಬೆಸ್ತ ಸಮುದಾಯದವರಿಗೆ 18 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕೆಂದು ಅಂಬಿಗರ ಚೌಡಯ್ಯ ಮಹಾಸಭಾದ ರಾಜ್ಯಾಧ್ಯಕ್ಷ ಅಂಬಿಕ ಜಾಲಗಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನಾಲ್ಕನೇ ಅತಿ ದೊಡ್ಡ ಹಿಂದುಳಿದ ಸಮುದಾಯವಾದ ಅಂಬಿಗ, ಬೆಸ್ತ, ಕೋಲಿ , ಕಬ್ಬಿಲಿಗ, ಮೊಗವೀರ, ತಳವಾರ ಇತ್ಯಾದಿ 39 ಒಳಪಂಗಡ ಒಳಗೊಂಡಿರುವ ಅಂಬಿಗ (ಗಂಗಾಮತ)ಸಮುದಾಯ ಪ್ರಾಬಲ್ಯಹೊಂದಿರುವ 18 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಈ ಮೂಲಕ ಒತ್ತಾಯಿಸಿದರು.

40 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿರುವ ನಮ್ಮ ಅಸಂಘಟಿತ ಸಮುದಾಯ ಆರ್ಥಿಕವಾಗಿ ತೀರ ಹಿಂದುಳಿದ ಕಾರಣ ರಾಷ್ಟ್ರೀಯ ಪಕ್ಷವಾಗಲಿ, ಪ್ರಾದೇಶಿಕ ಪಕ್ಷವಾಗಲಿ ನಮ್ಮ ಸಮುದಾಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮ ಸಮುದಾಯದ ಜನಸಂಖ್ಯೆ ಅನುಗುಣವಾಗಿ ಇತ್ತೀಚಿನ ದಿನಗಳಲ್ಲಿ ವಿಧಾನಸಭೆ, ವಿಧಾನಪರಿಷತ್, ಲೋಕಸಭಾ ರಾಜ್ಯಸಭಾಗಳಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯದೆ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದೆ ತೀವ್ರ ಹಿನ್ನಡೆ ಹೊಂದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬಸವ ಕಲ್ಯಾಣ, ಸೇಡಂ, ಅಫಜಲ್‍ಪುರ, ಗುರುಮಿಟ್ಕಲ್, ಯಾದಗಿರಿ, ಜೇವರ್ಗಿ, ಹಿಂಡಿ, ದೇವರ ಹಿಪ್ಪರಗಿ,ದಂಬಲೇಶ್ವರ, ಬಾಗಲಕೋಟೆ, ಹರಿಹರ, ಹಾನಗಲ್, ಕಾರವಾರ, ಉಡುಪಿ, ಕಾಪು, ಮಂಗಳೂರು, ಚನ್ನಪಟ್ಟಣ ಮತ್ತು ಶ್ರೀರಂಗಪಟ್ಟಣ, ವಿಧಾನಸಭಾ ಕ್ಷೇತ್ರಗಳಲ್ಲಿ ನಮಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ