ಹರಪನಹಳ್ಳಿ ಹಾಗೂ ಬಳ್ಳಾರಿ ಕ್ಷೇತ್ರಕ್ಕೆ ಯಾರಅಗಲಿದ್ದಾರೆ ಬಿಜೆಪಿ ಅಭ್ಯರ್ಥಿ ….?

ಬೆಂಗಳೂರು, ಏ.4-ಪಕ್ಷಕ್ಕೂ, ಬಿಜೆಪಿಗೂ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿರುವುದರಿಂದ ಸಹೋದರರ ಸ್ಥಿತಿ ಡೋಲಾಯಮಾನವಾಗಿದೆ.

ಈಗಾಗಲೇ ಬಳ್ಳಾರಿ ನಗರ ಹಾಗೂ ಹರಪ್ಪನಹಳ್ಳಿ ಕ್ಷೇತ್ರದಿಂದ ರೆಡ್ಡಿ ಸಹೋದರರಾದ ಕರುಣಾಕರ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಈ ಬಾರಿಯ ಚುನಾವಣೆಯಲ್ಲಿ ಅಖಾಡಕ್ಕಿಳಿಯಲು ಸಜ್ಜಾಗಿದ್ದರು.

ಪರಿವರ್ತನಾ ಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಈ ಇಬ್ಬರಿಗು ಟಿಕೆಟ್ ಖಾತ್ರಿ ಪಡೆಸಿದ್ದರು. ಆದರೆ ಅವರ ಸಹೋದರ ಜನಾರ್ಧನ ರೆಡ್ಡಿ ಅವರನ್ನು ಪಕ್ಷದಿಂದ ದೂರ ಇಡಲು ಮುಂದಾಗಿರುವುದು ರೆಡ್ಡಿ ಬಳಗದಲ್ಲಿ ಆತಂಕ ಮೂಡಿಸಿದೆ.

ಸೋಮಶೇಖರ ರೆಡ್ಡಿ ಹಾಗೂ ಕರುಣಾಕರ ರೆಡ್ಡಿಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೇ ಕೈತಪ್ಪುತ್ತದೆಯೋ ಎಂಬ ಭೀತಿ ಇಬ್ಬರಲ್ಲೂ ಕಾಡುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಇಬ್ಬರು ಸಹೋದರರು ಕಳೆದ ಒಂದು ವರ್ಷದಿಂದಲೇ ಭರ್ಜರಿ ರಣತಂತ್ರ ರೂಪಿಸಿದ್ದರು.
ಯಾವಾಗ ಅಮಿತ್ ಷಾ ಈ ಹೇಳಿಕೆ ನೀಡಿದರೋ ಹರಪನಹಳ್ಳಿ ಹಾಗೂ ಬಳ್ಳಾರಿ ನಗರ ಕ್ಷೇತ್ರಕ್ಕೆ ಬಿಜೆಪಿಯಿಂದ ಯಾರು ಕಣಕ್ಕಿಳಿಯಲ್ಲಿದ್ದಾರೆ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
ಮೂಲಗಳ ಪ್ರಕಾರ ರೆಡ್ಡಿಯನ್ನು ಪಕ್ಷದಿಂದ ದೂರ ಇಟ್ಟು ಇಬ್ಬರು ಸಹೋದರರ ಜೊತೆಗೆ ಬಳ್ಳಾರಿ ಗ್ರಾಮೀಣ ಮೀಸಲು ಕ್ಷೇತ್ರಕ್ಕೆ ಹಾಲಿ ಸಂಸದ ಶ್ರೀರಾಮುಲುಗೆ ಟಿಕೆಟ್ ನೀಡಲು ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ.

ರೆಡ್ಡಿ ಕುಟುಂಬವನ್ನು ಸಂಪೂರ್ಣವಾಗಿ ಪಕ್ಷದಿಂದ ದೂರ ಇಟ್ಟರೆ ತಪ್ಪು ಸಂದೇಶ ರವಾನೆಯಾಗಬಹುದೆಂಬ ಆತಂಕವೂ ಪಕ್ಷದ ವಲಯದಲ್ಲಿದೆ. ತೆರೆ ಮರೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ರೆಡ್ಡಿ ಸಹಕಾರ ನೀಡಬೇಕು. ಆದರೆ ಇಂಥವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿಯುವಂತಿಲ್ಲ.

ಮುಂಬೈ ಪ್ರವಾಸದಲ್ಲಿರುವ ಜನಾರ್ಧನ ರೆಡ್ಡಿ ಇಂದು ನಗರಕ್ಕೆ ಆಗಮಿಸಲಿದ್ದಾರೆ. ಸಂಜೆ ಅವರು ರಾಮುಲು ಜೊತೆ ಮಾತುಕತೆ ನಡೆಸಲಿದ್ದಾರೆ.
ಎರಡು ದಿನಗಳ ಹಿಂದೆ ರಾಮುಲು ಮತ್ತು ಯಡಿಯೂರಪ್ಪ ಮಾತುಕತೆ ನಡೆಸಿದ್ದರು. ಅಲ್ಲಿ ನಡೆದಿರುವ ವಿಷಯಗಳನ್ನು ರೆಡ್ಡಿ ಜೊತೆ ಹಂಚಿಕೊಳ್ಳಲಿದ್ದಾರೆ.
ಅಮಿತ್ ಷಾ ಈ ರೀತಿ ಹೇಳಿಕೆ ಕೊಡಲು ಬಿಜೆಪಿಯಲ್ಲಿರುವ ಯಡಿಯೂರಪ್ಪನವರ ಬೆಂಬಲಿಗರೇ ಕಾರಣ ಎಂದು ಜನಾರ್ಧನ ರೆಡ್ಡಿ ಮುನಿಸಿಕೊಂಡಿದ್ದಾರೆ.
ಆದರೆ ಇದರಲ್ಲಿ ನನ್ನ ಕೈವಾಡ ಏನೂ ಇಲ್ಲ ಎಂದು ರಾಮುಲು ಬಳಿ ಬಿಎಸ್‍ವೈ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ