ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಣಾಳಿಕೆ ಕುರಿತು ಬಿಜೆಪಿ ಮಹತ್ವದ ಚರ್ಚೆ

 

ಬೆಂಗಳೂರು, ಏ.4-ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ನಾಯಕರ ಪ್ರಚಾರ ನಿಗಧಿ, ಚುನಾವಣಾ ಪ್ರಣಾಳಿಕೆ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಬಿಜೆಪಿ ಪ್ರಮುಖರು ಪಕ್ಷದ ಕಚೇರಿಯಲ್ಲಿಂದು ಚರ್ಚೆ ನಡೆಸಿದರು.

ಬೆಂಗಳೂರಿನ ಹೊರವಲಯದ ರೆಸಾರ್ಟ್‍ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ ಪಿಯೂಶ್ ಗೋಯಲ್, ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಪುರಂದರೇಶ್ವರಿ ಮತ್ತಿತರರು ಭಾಗವಹಿಸಿದ್ದರು.

ಮೊದಲ ದಿನವಾದ ಇಂದು ಬೆಂಗಳೂರಿನ 14, ಬೀದರ್ 6, ಕಲ್ಬುರ್ಗಿ9, ಯಾದಗಿರಿ 4 ಕ್ಷೇತ್ರಗಳು, ಬಳ್ಳಾರಿ, ರಾಯಚೂರು, ಕೊಪ್ಪಳ , ರಾಮನಗರ, ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಸೇರಿದಂತೆ ಒಟ್ಟು 73 ಕ್ಷೇತ್ರಗಳ ಪ್ರಮುಖರ ಜೊತೆ ಚರ್ಚೆ ನಡೆಸಲಾಯಿತು.

ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಪದಾಧಿಕಾರಿಗಳ ಸಲಹೆಸೂಚನೆಗಳನ್ನು ಪಡೆದು ಅಂತಿಮವಾಗಿ ಸರ್ವಸಮ್ಮತದ ಅಭ್ಯರ್ಥಿಗೆ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಿದೆ.

ಪದಾಧಿಕಾರಿಗಳು ಹಾಗೂ ಆಕಾಂಕ್ಷಿಗಳನ್ನು ಕಡೆಗಣಿಸಿ ಟಿಕೆಟ್ ನೀಡಿದರೆ ಚುನಾವಣಾ ಸಂದರ್ಭದಲ್ಲಿ ಭಿನ್ನಮತಕ್ಕೆ ಕಾರಣವಾಗಬಹುದು. ಇದರಿಂದ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಮನಗಂಡು ಕಾರ್ಯಕರ್ತರಿಂದ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ.

ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಸರಣಿ ಸಭೆಯಲ್ಲಿ ಪ್ರತಿದಿನ 75 ಕ್ಷೇತ್ರಗಳಂತೆ ಆಯಾ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳ ಹಾಗೂ ಪ್ರಮುಖರ ಜೊತೆ ಮುಖಾಮುಖಿ ಭೇಟಿಯಾಗಿ ಅಭಿಪ್ರಾಯ ಸಂಗ್ರಹಣೆ ನಡೆಯಲಿದೆ.
ಇದರ ಜೊತೆಗೆ ವಿಧಾನಸಭೆ ಚುನಾವಣೆಗೆ ಇನ್ನು ಮುಂದೆ ಪ್ರಚಾರಕರ ಪಟ್ಟಿಯನ್ನು ಸಿದ್ದಪಡಿಸಿ ಯಾರು, ಎಲ್ಲಿ, ಯಾವ ದಿನದಂದು ಪ್ರಚಾರ ನಡೆಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.

ಪ್ರತಿ ಜಿಲ್ಲೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭರ್ಜರಿ ಪ್ರಚಾರ ನಡೆಸಲು ಪಕ್ಷ ತೀರ್ಮಾನಿಸಿದೆ. ಮೂಲಗಳ ಪ್ರಕಾರ ಚುನಾವಣಾ ಅಂತಿಮ ಪ್ರಚಾರ ಮುಗಿಯುವವರೆಗೂ ರಾಜ್ಯದಲ್ಲಿ ಮೋದಿ ಸುಮಾರು 20ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮೋದಿಯ ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಬಿಜೆಪಿ ಆಡಳಿತಾರೂಢ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್, ವಸುಂಧರಾ ರಾಜೆ, ಶಿವರಾಜ್ ಸಿಂಗ್ ಚವ್ಹಾಣ್, ಡಾ.ರಮಣಸಿಂಗ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ , ಸ್ಪೃತಿ ಇರಾನಿ, ಸುಷ್ಮಾ ಸ್ವರಾಜ್, ನಿರ್ಮಲ ಸೀತಾರಾಮನ್ ಸೇರಿದಂತೆ ಮತ್ತಿತರರನ್ನು ಕರೆಸಲು ಸಭೆ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ