ಬೆಂಗಳೂರು, ಏ.2- ವಿಧಾನಸಭೆ ಚುನಾವಣೆಯಲ್ಲಿ ಕನ್ನಡಪರ ಸಂಘಟನೆಗಳ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಮ್ಮ ನೆಲದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಚುನಾವಣೆಗೆ ನಿಂತು ಗೆಲ್ಲುತ್ತಾರೆ. ಆದರೆ, ಕನ್ನಡಪರ ಹೋರಾಟಗಾರರು ನಿಂತು ಗೆಲ್ಲಲು ಸಾಧ್ಯವಾಗದಿರುವುದು ವಿಷಾದಕರ ಸಂಗತಿ. ಈ ಬಾರಿಯ ಚುನಾವಣೆಯಲ್ಲಿ ಎಂಇಎಸ್ ವಿರುದ್ಧ ಕನ್ನಡಪರ ಸಂಘಟನೆಗಳವರು ನಿಲ್ಲಬೇಕು ಮತ್ತು ಅದಕ್ಕೆ ಎಲ್ಲ ರಾಜಕೀಯ ಪಕ್ಷಗಳವರೂ ಬೆಂಬಲ ಕೊಡಬೇಕು ಎಂದು ಹೇಳಿದರು.
ಶಾಸನ ಸಭೆಗೆ ಸುಮಾರು 25ಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರರು ಆರಿಸಿ ಬರಬೇಕು. ಕನ್ನಡದ ಧ್ವನಿ ಶಾಸನ ಸಭೆಯಲ್ಲಿ ಮೊಳಗುವಂತಾಗಬೇಕು ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳಿಗೆ ಒಂದು ಚೌಕಟ್ಟು, ಚೆಕ್ಬಂದಿ ಇರುತ್ತದೆ. ಅವರು ಅದರಡಿ ಕೆಲಸ ಮಾಡಬೇಕಾಗುತ್ತದೆ. ಪ್ರಾದೇಶಿಕತೆಯನ್ನು ಅವರು ಕಡೆಗಣಿಸುತ್ತಾರೆ. ಹೀಗಾಗಿ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ. ಹಾಗಾಗಿ ಎಲ್ಲ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನೇತೃತ್ವದಲ್ಲಿ ಕರ್ನಾಟಕ ಪ್ರಜಾ ಸಂಯುಕ್ತರಂಗ ಎಂಬ ಪಕ್ಷ ರಚಿಸಲಾಗಿದ್ದು, ಎಲ್ಲ ಸಂಘಟನೆಗಳವರು ಅವರ ಪ್ರತ್ಯೇಕ ಸಂಘಟನೆಯಡಿ ಚುನಾವಣೆಗೆ ಸ್ಪರ್ಧಿಸಬೇಕು. ಈ ಮೂಲಕ ನಾಡು-ನುಡಿ-ಸಂಸ್ಕøತಿ ಉಳಿವಿಗೆ ಶ್ರಮಿಸಬೇಕು ಎಂದು ವಾಟಾಳ್ ಕರೆ ನೀಡಿದರು.
ಇತ್ತೀಚೆಗೆ ಶಾಸನಸಭೆಯಲ್ಲಿ ಕನ್ನಡದ ಧ್ವನಿ ಇಲ್ಲದಂತಾಗಿದೆ. ಕನ್ನಡಪರ ಹೋರಾಟಗಾರರು ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಇಲ್ಲ. ಅವರ ಆಯ್ಕೆ ಅಗತ್ಯ ಮತ್ತು ಅನಿವಾರ್ಯವಾಗಿದೆ. ಹಾಗಾಗಿ ಹೋರಾಟಗಾರರಿಗೆ ನಾವು ಬೆಂಬಲ ನೀಡಿ ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ ನಾಡಿನ ಜನತೆ ಚಿಂತಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಇದೇ 5ರಂದು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡು ಬಂದ್ಗೆ ಕರೆ ಕೊಟ್ಟಿರುವುದನ್ನು ವಿರೋಧಿಸಿ ಕನ್ನಡ ಒಕ್ಕೂಟದ ವತಿಯಿಂದ ಅತ್ತಿಬೆಲೆ ಬಳಿ ಗಡಿ ಬಂದ್ ಮಾಡಿ ಸಾಂಕೇತಿಕ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದು. ಇದಕ್ಕಾಗಿ ಆಗ್ರಹಿಸಿ ಕರ್ನಾಟಕ ಬಂದ್ ಮಾಡಲು ಹಿಂಜರಿಯುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ವಾಟಾಳ್ ಹೇಳಿದರು.