ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ

ಬೆಂಗಳೂರು, ಏ.2- ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಬಿರುಸುಗೊಂಡಿದೆ. ಟಿಕೆಟ್ ವಂಚಿತರು, ಆಕಾಂಕ್ಷಿಗಳು ಆಯಾರಾಂ-ಗಯಾರಾಂರಂತಹವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಹೆಚ್ಚಾಗತೊಡಗಿದ್ದು, ನಾಮಪತ್ರ ಸಲ್ಲಿಸುವ ಕೊನೆ ಕ್ಷಣದವರೆಗೂ ಈ ರಂಗಿನಾಟ ಮುಂದುವರಿಯಲಿದೆ.

ದೇವರ ಹಿಪ್ಪರಗಿ ಕ್ಷೇತ್ರದ ಶಾಸಕ ಜೆಡಿಎಸ್‍ನಿಂದ ಅಸಮಾಧಾನಗೊಂಡು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಅಲ್ಲಿನ ಬಿಜೆಪಿ ಮುಖಂಡರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ.
ಅಫ್ಜಲ್‍ಪುರ ಕ್ಷೇತ್ರದ ಶಾಸಕ ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಂತೆ ಆ ಕ್ಷೇತ್ರದ ಬಿಜೆಪಿಯ ಪ್ರಭಾವಿ ಮುಖಂಡ, ಪರಾಜಿತ ಅಭ್ಯರ್ಥಿ ಎಂ.ವೈ.ಪಾಟೀಲ್ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.

ತಮ್ಮ ಕ್ಷೇತ್ರದ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇತ್ತ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಜಮೀರ್ ಅಹಮ್ಮದ್ ಅವರನ್ನು ಹಣಿಯಲು ತಂತ್ರ ಹೆಣೆದಿರುವ ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್‍ನ ಅಲ್ತಾಫ್‍ಖಾನ್‍ನನ್ನು ಜೆಡಿಎಸ್‍ಗೆ ಸೆಳೆದಿದ್ದಾರೆ.
ಇಂದು ದೇವೇಗೌಡರ ನೇತೃತ್ವದಲ್ಲಿ ಅವರು ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ರುದ್ರೇಶ್‍ಗೌಡ ಅವರನ್ನು ಕಣೆಗಣಿಸಿ ಈಶ್ವರಪ್ಪ ಅವರಿಗೆ ಮಣೆ ಹಾಕಿದ್ದರಿಂದ ರುದ್ರೇಶ್‍ಗೌಡ ಅವರು ಬೇಸರಗೊಂಡಿದ್ದಾರೆ. ನಾನು ವಿಧಾನ ಪರಿಷತ್‍ಗೆ ಆಯ್ಕೆಯಾಗಲು ಬಯಸುವುದಿಲ್ಲ. ಜನರಿಂದ ನೇರವಾಗಿ ಆಯ್ಕೆಯಾಗಲು ಬಯಸುತ್ತೇನೆ ಎಂದು ಹೇಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಹರತಾಳ ಹಾಲಪ್ಪ ಕೂಡ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಇನ್ನು ಬಳ್ಳಾರಿಯಲ್ಲಿ ಬಿಜೆಪಿಯ ಬಿ.ನಾಗೇಂದ್ರ, ಆನಂದ್‍ಸಿಂಗ್ ಅವರು ಕಾಂಗ್ರೆಸ್ ಸೇರುತ್ತಿದ್ದಂತೆ ಬಿಜೆಪಿ ಮುಖಂಡರಾದ ಶ್ರೀರಾಮುಲು ಕಾಂಗ್ರೆಸ್‍ನಲ್ಲಿದ್ದ ಗವಿಯಪ್ಪ, ಲಿಂಗಣ್ಣ ಅವರನ್ನು ಬಿಜೆಪಿಗೆ ಸೆಳೆದಿದ್ದಾರೆ.

ಗವಿಯಪ್ಪ ಈಗಾಗಲೇ ಬಿಜೆಪಿ ಸೇರ್ಪಡೆಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ ಕೆಪಿಸಿಸಿ ಸದಸ್ಯರಾಗಿರುವ ಲಿಂಗಣ್ಣ ಸದ್ಯದಲ್ಲೇ ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿ.ನಾಗೇಂದ್ರ ಅವರ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳಾಗಲಿದ್ದಾರೆ.

ಹನೂರು ಕ್ಷೇತ್ರದಿಂದ ವಿ.ಸೋಮಣ್ಣ ಸ್ಪರ್ಧಿಸಲು ತೀರ್ಮಾನಿಸಿದ್ದರು. ಆದರೆ, ಪರಿಮಳ ನಾಗಪ್ಪ ಅವರ ಮಗ ಪ್ರೀತಮ್ ಅವರಿಗೆ ಪಕ್ಷ ಟಿಕೆಟ್ ನೀಡಲು ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಅವರು ಹಿಂದೆ ಸರಿದು ಇನ್ನೊಂದೆರಡು ದಿನಗಳಲ್ಲಿ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ಹೇಳುವ ಜತೆಗೆ ನಾನು ಬಿಜೆಪಿ ತೊರೆಯುವುದಿಲ್ಲ, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ರೀತಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಒಂದೊಂದು ಕ್ಷೇತ್ರದಲ್ಲಿ ನಾಲ್ಕೈದು ಜನ ಆಕಾಂಕ್ಷಿಗಳಿದ್ದು, ಟಿಕೆಟ್ ಸಿಗದಿದ್ದರೆ ಬೇರೆ ಬೇರೆ ಪಕ್ಷಗಳಿಗೆ ನೆಗೆಯುವ ಸಾಧ್ಯತೆ ಇದೆ. ಕೊನೆ ಕ್ಷಣದವರೆಗೆ ಯಾರು, ಯಾವ ಪಕ್ಷದಲ್ಲಿ ಉಳಿದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ