ನವದೆಹಲಿ, ಏ.1-ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್ಎಚ್ಎಐ)2017-18ನೇ ಹಣಕಾಸು ಸಾಲಿನಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 150 ರಸ್ತೆ ಯೋಜನೆಗಳಿಗೆ 1,22.000 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈ ಯೋಜನೆ ಅಡಿ ಒಟ್ಟು 7,400 ಕಿ.ಮೀ. ಉದ್ದದ ರಸ್ತೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಕಳೆದ ಐದು ವರ್ಷಗಳಲ್ಲಿ ದೇಶದ ವಿವಿಧ ರಾಜ್ಯಗಳ ರಸ್ತೆ ನಿರ್ಮಾಣ ಯೋಜನೆಗಳ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ರಸ್ತೆ ಪ್ರಾಧಿಕಾರವು, 2017-18ನೇ ಸಾಲಿಗೆ ಅತಿ ಹೆಚ್ಚು ಹಣ ಬಿಡುಗಡೆ ಮಾಡಿದೆ ಎಂದು ವಿವರಿಸಿದೆ.
ರಾಜಸ್ತಾನ (1,234 ಕಿ.ಮೀ.), ಮಹಾರಾಷ್ಟ್ರ(739), ಒಡಿಶಾ(747), ಉತ್ತರಪ್ರದೇಶ(725), ತಮಿಳುನಾಡು(511), ಆಂಧ್ರಪ್ರದೇಶ (508), ಕರ್ನಾಟಕ(468), ಗುಜರಾತ್(449), ಮಧ್ಯಪ್ರದೇಶ(389), ಹರ್ಯಾಣ(331), ಬಿಹಾರ(232), ಜಾರ್ಖಂಡ್(201), ತೆಲಂಗಾಣ(189), ಪಶ್ಚಿಮ ಬಂಗಾಳ(126), ಪಂಜಾಬ್(120) ಹಾಗೂ ಜಮ್ಮು ಮತ್ತು ಕಾಶ್ಮೀರ(100) ಈ ರಾಜ್ಯಗಳಿಗಾಗಿ ಒಟ್ಟು 1.22 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ ಭಾರತ್ಮಾಲಾ ಯೋಜನೆ ಮಂಜೂರಾತಿ ನಂತರ ರಸ್ತೆ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಕಳೆದ ಸಾಲಿನಲ್ಲಿ 4,335 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಯೋಜನೆಗಳನ್ನು ಮಂಜೂರು ಮಾಡಲಾಗಿತ್ತು ಎಂದು ಎನ್ಎಚ್ಎಐ ವಿವರಿಸಿದೆ.
ಒಟ್ಟು 232 ರಸ್ತೆ ನಿರ್ಮಾಣ ಯೋಜನೆಗಳಿಗಾಗಿ 1.96,000 ಕೋಟಿ ರೂ. ವೆಚ್ಚದಲ್ಲಿ 11,200 ಕಿ.ಮೀ.ರಸ್ತೆ ನಿರ್ಮಾಣಕ್ಕಾಗಿ ಟೆಂಡರ್ಗಳನ್ನು ಆಹ್ವಾನಿಸಲಾಗಿತ್ತು. ಮುಂದಿನ ಹಣಕಾಸು ವರ್ಷದ ಮೊದಲ ಎರಡು ತಿಂಗಳಿಗೆ 3,000 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.