ಬಿಜೆಪಿಗೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತ¥ಡಿಸಿದÀ ಯಡಿಯೂರಪ್ಪ ಆಪ್ತ ರುದ್ರೇಗೌಡ

ಬೆಂಗಳೂರು,ಏ.1-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಬಂಡಾಯ ಜೋರಾಗುತ್ತಿರುವುದು ಪಕ್ಷದ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ನಿನ್ನೆಯಷ್ಟೇ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಯಡಿಯೂರಪ್ಪನವರ ಆಪ್ತ ಮಾಜಿ ಸಚಿವ ಹರತಾಳ್ ಹಾಲಪ್ಪ ಪಕ್ಷ ಬಿಡುವ ಮುನ್ಸೂಚನೆ ನೀಡಿದ್ದರು.

ಇದರ ಬೆನ್ನಲ್ಲೇ ಯಡಿಯೂರಪ್ಪನವರ ಮತ್ತೋರ್ವ ಆಪ್ತ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ 2013ರ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆ ಅಂತರದಿಂದ ಪರಾಭವಗೊಂಡಿದ್ದ ರುದ್ರೇಗೌಡ ಪಕ್ಷಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ರುದ್ರೇಗೌಡ ಬದಲಿಗೆ ಈ ಬಾರಿ ಪಕ್ಷದ ಹಿರಿಯ ಮುಖಂಡ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ನೀಡಲು ವರಿಷ್ಠರು ಸಮ್ಮತಿಸಿದರು.

ನಿನ್ನೆ ಯಡಿಯೂರಪ್ಪ ಕೂಡ ಇದನ್ನು ಬಹಿರಂಗಪಡಿಸಿ ಶಿವಮೊಗ್ಗದಿಂದ ಈಶ್ವರಪ್ಪನವರಿಗೆ ಟಿಕೆಟ್ ನೀಡಲಾಗುವುದು, ರುದ್ರೇಗೌಡರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡುವುದಾಗಿ ಹೇಳಿದ್ದರು.
ಇದರಿಂದ ಮುನಿಸಿಕೊಂಡಿರುವ ರುದ್ರೇಗೌಡ ನಾನು ಈಗಲೂ ಶಿವಮೊಗ್ಗ ನಗರದ ಪ್ರಬಲ ಆಕಾಂಕ್ಷಿ. ವರಿಷ್ಠರು ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ದನಿದ್ದೇನೆ.ನನಗೆ ಟಿಕೆಟ್ ಕೈ ತಪ್ಪಿದರೆ ಪಕ್ಷದಲ್ಲಿ ಮುಂದುವರೆಯಬೇಕೆ ಬೇಡವೆ ಎಂಬ ಬಗ್ಗೆ ಬೆಂಬಲಿಗರ ಜೊತೆ ಚರ್ಚಿಸುತ್ತೇನೆ ಎಂದರು.
ಮೂಲಗಳ ಪ್ರಕಾರ ಪಕ್ಷದ ಪ್ರಾಥಮಿಕ ಸ್ಥಾನ ಹಾಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅವರ ಬೆಂಬಲಿಗರು ಒತ್ತಡ ಹಾಕಿದ್ದಾರೆ. ಪಕ್ಷದೊಳಗಿನ ಈ ದಿಢೀರ್ ಬೆಳವಣಿಗೆ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ.

ಇನ್ನೊಂದು ಮೂಲಗಳ ಪ್ರಕಾರ ರುದ್ರೇಗೌಡರ ಜೊತೆ ಸತತ ಸಂಪರ್ಕದಲ್ಲಿರುವ ಯಡಿಯೂರಪ್ಪ , ಯಾವುದಕ್ಕೂ ಆತುರದ ನಿರ್ಧಾರ ಕೈಗೊಳ್ಳಬಾರದು. ತಮಗೆ ಪಕ್ಷದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ. ಕಷ್ಟ ಕಾಲದಲ್ಲಿ ನನ್ನ ಜೊತೆ ಇದ್ದೀರಿ ಮುಂದೆಯೂ ಇರಬೇಕು. ಮುಂದೆ ನಿಮ್ಮನ್ನು ಪರಿಷತ್‍ಗೆ ಆಯ್ಕೆ ಮಾಡುವ ಹೊಣೆಗಾರಿಕೆ ನನಗೆ ಬಿಡಿ ಎಂಬ ಆಶ್ವಾಸನೆಯನ್ನು ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ