ಮಂಡ್ಯ ,ಮಾ.30- ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ತೀವ್ರ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ವರಿಷ್ಠರಾದ ದೇವೇಗೌಡ ಅವರ ಹೆಗಲಿಗೆ ವರ್ಗಾಯಿಸಲು ಎಚ್.ಡಿ.ಕುಮಾರಸ್ವಾಮಿ ಕೈಗೊಂಡಿರುವ ನಿರ್ಧಾರಕ್ಕೆ ಆಕಾಂಕ್ಷಿಗಳು ಸಹಮತ ಸೂಚಿಸಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಸಂಬಂಧ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಕರೆದಿದ್ದ ಆಕಾಂಕ್ಷಿಗಳ ಗೌಪ್ಯ ಸಭೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಸಾಧ್ಯವಾಗಲಿಲ್ಲ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಒಮ್ಮತದ ಅಭ್ಯರ್ಥಿ ನೀವೇ ನಿರ್ಧಾರ ಮಾಡಿಕೊಂಡು ಬನ್ನಿ ಎನ್ನುವುದು ಅಸಾಧ್ಯ. ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಬೇಕು, ಟಿಕೆಟ್ ಆಕಾಂಕ್ಷಿ ಪ್ರತಿ ನಾಯಕನ ಹಕ್ಕು , ಆದರೆ ಗೆಲುವಿನ ಮಾನದಂಡಗಳು ಬೇರೆ. ಇಂದಿನ ರಾಜಕಾರಣದಲ್ಲಿ ದುಡ್ಡು ಮತ್ತು ವರ್ಚಸ್ಸು ಬಹಳ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಆದರೆ ಪಕ್ಷದಲ್ಲಿ ದಶಕಗಳಿಂದ ದುಡಿದವರು ಇದ್ದಾರೆ. ಅವರಿಗೆ ದುಡ್ಡು ಹೊಂದಿಸುವುದು ಕಷ್ಟ. ಹೀಗಾಗಿ ಎಲ್ಲಾ ಮಾನದಂಡಗಳನ್ನು ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿ ಆಯ್ಕೆ ಮಾಡಬೇಕು. ಹಾಗಾಗಿ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಬಂಡಾಯ ಸ್ಪರ್ಧೆ ಒಳ್ಳೆಯದಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿ ಅವರು ಅಭ್ಯರ್ಥಿಗಳ ಜೊತೆ ವೈಯಕ್ತಿಕವಗಿ ಮಾತುಕತೆ ನಡೆಸಿದರಾದರೂ ಯಾವುದೇ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಆಯ್ಕೆ ಜವಾಬ್ದಾರಿಯನ್ನು ದೇವೇಗೌಡರಿಗೆ ನೀಡಲು ಸಮ್ಮತಿಸಲಾಯಿತು.
ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಪ್ರಭಾವತಿ ಜಯರಾಮ್, ಅಶೋಕ್ ಜಯರಾಮ್, ಚಂದಗಾಲು ಶಿವಣ್ಣ , ಸಿದ್ದರಾಮೇಗೌಡ, ಎಂ.ಶ್ರೀನಿವಾಸ್, ಕಿಲಾರ ರಾಧಕೃಷ್ಣ , ಡಾ.ಕೃಷ್ಣ , ಡಾ.ಶಂಕರೇಗೌಡ ಉಪಸ್ಥಿತರಿದ್ದರು.