ಶಾಸಕ ಮಾಲೀಕಯ್ಯ ಗುತ್ತೇದಾರ್ ತಾವಾಗಿಯೇ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿಲ್ಲ

ಕಲಬುರಗಿ, ಮಾ.30-ಕಾಂಗ್ರೆಸ್‍ನಿಂದ ಬಂದಿರುವ ಶಾಸಕ ಮಾಲೀಕಯ್ಯ ಗುತ್ತೇದಾರ್ ತಾವಾಗಿಯೇ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತೇದಾರ್ ಬೇಷರತ್ತಾಗಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಗುತ್ತೇದಾರ್ ಅವರನ್ನು ನೀವೇ ಕರೆದರಾ… ಅಥವಾ ಅವರಾಗಿಯೇ ಬಂದಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರೀತಿ ಎಡಗಡೆ ಹುಟ್ಟುತ್ತಾ… ಅಥವಾ ಬಲಗಡೆ ಹುಟ್ಟುತ್ತಾ…ಹುಡುಗನ ಕಡೆಯಿಂದ ಹುಡುಗಿ ಕಡೆಯಿಂದ ಹುಟ್ಟುತ್ತಾ ಎಂದು ಮರು ಪ್ರಶ್ನೆ ಹಾಕಿದರು.

ಪ್ರೀತಿ ಎಲ್ಲಿಂದಲೇ ಹುಟ್ಟಲಿ, ಯಾರಿಂದಲೇ ಹುಟ್ಟಲಿ ಪ್ರೀತಿ ಮಾತ್ರ ಮುಖ್ಯ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿ ಗಂಗಾನದಿ ಇದ್ದ ಹಾಗೆ. ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ಎಲ್ಲರನ್ನು ನಮ್ಮ ಪಕ್ಷ ಶುದ್ಧಗೊಳಿಸುತ್ತದೆ, ಕಾಂಗ್ರೆಸ್ ಸೋಲಿಸುವುದೇ ನಮ್ಮ ಪಕ್ಷದ ಮೊದಲ ಗುರಿ ಎಂದರು.

ರಾಜ್ಯದ 224 ಕ್ಷೇತ್ರಗಳ ಬಿಜೆಪಿ ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಆದರೆ ಮಾಧ್ಯಮಗಳಲ್ಲಿ ಫೈನಲ್ ಆಗಿದೆ ಎಂಬ ಸುದ್ದಿ ಬರುತ್ತಿದೆ. ಅಭ್ಯರ್ಥಿಗಳ ಆಯ್ಕೆ ನಮ್ಮ ಕೇಂದ್ರ ಸಮಿತಿ ಮೂರು ಅಂಶಗಳ ಸೂತ್ರ ರಚಿಸಿದೆ ಎಂದು ಈಶ್ವರಪ್ಪ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಧಾನಿನರೇಂದ್ರ ಮೋದಿ ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎಂದು ಅವರು ಟೀಕಿಸಿದರು.

ನರೇಂದ್ರ ಮೋದಿ ಬೆಂಕಿ ಇದ್ದ ಹಾಗೆ, ಸಿದ್ದರಾಮಯ್ಯ ಕಡ್ಡಿ ಎಂದು ವಿಶ್ಲೇಷಿಸಿದ ಈಶ್ವರಪ್ಪ, ಅವರಿಬ್ಬರಿಗೂ ಎಲ್ಲಿಂದ ಎಲ್ಲಿಗೆ ಸಂಬಂಧ. ಮುಖ್ಯಮಂತ್ರಿ ತಮ್ಮ ಹುದ್ದೆಗೆ ಗೌರವ ತರುವಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಅಹಿಂದಾ ಹೆಸರು ಹೇಳಿಕೊಂಡು ಕಾಂಗ್ರೆಸ್‍ಗೆ ಬಂದು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಈ ವರ್ಗಗಳ ಜನರಿಗೆ ನ್ಯಾಯ ದೊರಕಿಸಲಿಲ್ಲ ಎಂದು ಹೇಳಿದರು.

ಭಿನ್ನಾಭಿಪ್ರಾಯ ಸಹಜ: ನನ್ನ ಮತ್ತು ಯಡಿಯೂರಪ್ಪ ಮಧ್ಯೆ ಯಾವುದೇ ಜಗಳ ಇಲ್ಲ. ಒಂದು ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯಗಳಿರುವುದು ಸಹಜ ಇದೇ ವೇಳೆ ಈಶ್ವರಪ್ಪ ತಿಳಿಸಿದರು. ನಾವಿಬ್ಬರು ರಾಮಲಕ್ಷ್ಮಣರಿದ್ದಂತೆ. ಕೆಲವು ಅಭಿಪ್ರಾಯಗಳ ಬಗ್ಗೆ ನಮ್ಮಿಬ್ಬರ ನಡುವೆ ವಿಷಯಾಧಾರಿತ ಚರ್ಚೆಯಾಗಿದೆ. ಆದರೆ ಅದು ಜಗಳ ಅಲ್ಲ ಎಂದು ಸ್ಪಷ್ಟಪಡಿಸಿದರು.

ಏ.3 ಹಿಂದುಳಿದ ವರ್ಗದವರ ಸಮಾವೇಶ:
ಏಪ್ರಿಲ್ 3 ರಂದು ಕಾಗಿನೆಲೆಯಲ್ಲಿ ಹಿಂದುಳಿದ ವರ್ಗದವರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಇದೇ ವೇಳೆ ಈಶ್ವರಪ್ಪ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ