ನಾಳೆ ಆರ್ಥಿಕ ವರ್ಷ ಆರಂಭ: ಯಾವುದು ಏರಿಕೆ? ಯಾವುದು ಇಳಿಕೆ?

ಹೊಸದಿಲ್ಲಿ: ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದ್ದು, ಬಜೆಟ್‍ನಲ್ಲಿ ಪ್ರತಿಪಾದಿಸಿದ ಅಂಶಗಳು  ಭಾನುವಾರದಿಂದ ಜಾರಿಯಾಗಲಿವೆ. ಕೆಲ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಕಾರಣ ಬೆಲೆ ಏರಲಿದೆ. ಹೀಗಾಗಿ ಯಾವುದರ ಬೆಲೆ ಇಳಿಯುತ್ತೆ? ಯಾವುದರ ಬೆಲೆ ಏರಿಕೆಯಾಗುತ್ತದೆ ಎನ್ನುವ ವಿವರ ಇಲ್ಲಿ ನೀಡಲಾಗಿದೆ.

ಏರಿಕೆಯಾಗಲಿರು ವಸ್ತುಗಳು

ಆಹಾರ ಉತ್ಪನ್ನಗಳು:
ಆರೆಂಜ್ ಫ್ರೂಟ್ ಜೂಸ್ ಶೇ. 3, ಫ್ರೂಟ್ ಜ್ಯೂಸ್ ಮತ್ತು ತರಕಾರಿ ಜ್ಯೂಸ್ ಶೇ. 50, ಕಚ್ಚಾ ಅಡುಗೆ ಎಣ್ಣೆ ಶೇ. 30, ಸಂಸ್ಕರಿಸಿದ ಅಡುಗೆ ಎಣ್ಣೆ ಶೇ.35 ಏರಿಕೆಯಾಗಲಿದೆ.

ಬಟ್ಟೆಗಳು:
ಪಾದರಕ್ಷೆಗಳು ಶೇ.20, ಪಾದರಕ್ಷೆಗಳ ಬಿಡಿಭಾಗಗಳು ಶೇ.15ಕ್ಕೆ ಏರಿಕೆಯಾಗಲಿದೆ.
ಎಲೆಕ್ಟ್ರಾನಿಕ್ ಉತ್ಪನ್ನಗಳು
ಚಾರ್ಜರ್ ಶೇ.10, ಸ್ಮಾರ್ಟ್ ವಾಚ್‍ಗಳು ಶೇ.20, ಎಲ್‍ಸಿಡಿ/ಎಲ್‍ಇಡಿ/ಒಎಲ್‍ಇಡಿ ಟಿವಿಗಳು ಶೇ.15, ಗೃಹ ಅಲಂಕಾರಿಕ ವಿದ್ಯುದ್ದೀಪಗಳು ಶೇ.20 ಏರಿಕೆಯಾಗಲಿದೆ.

ಆಟೋಮೊಬೈಲ್:
ಕಾರು, ಬೈಕ್‍ಗಳ ಬಿಡಿ ಭಾಗಗಳು ಶೇ.15, ಟ್ರಕ್ ಮತ್ತು ಬಸ್‍ಗಳ ಟಯರ್ ಗಳು ಶೇ.15ಕ್ಕೆ ಏರಿಕೆಯಾಗಲಿದೆ.

ಸೌಂದರ್ಯ ವರ್ಧಕಗಳು:
ಸುಗಂಧ ದ್ರವ್ಯ, ಡಿಯೋಡ್ರೆಂಟ್ ಶೇ.20, ಸೌಂದರ್ಯ ವರ್ಧಕಗಳು ಶೇ.20, ದಂತ ಶುದ್ಧಿಗೆ ಬಳಸುವ ವಸ್ತುಗಳು ಶೇ.20, ಶೇವಿಂಗ್ ಕ್ರೀಮ್, ಆಫ್ಟರ್ ಶೇವ್ ಶೇ.20ಕ್ಕೆ ಏರಿಕೆಯಾಗಲಿದೆ.

ಇತರೇ:
ಹಾಸಿಗೆ, ದಿಂಬು ಇತ್ಯಾದಿ ಶೇ.20, ಮಕ್ಕಳ ಆಟಿಕೆಗಳು ಶೇ.20 ಏರಿಕೆ, ವಿಡಿಯೋ ಗೇಮ್ ಉಪಕರಣಗಳು ಶೇ.20ಕ್ಕೆ, ಸಿಗರೇಟು, ಲೈಟರ್ ಗಳು ಎಲೆಕ್ಟ್ರಿಕ್ ಸಿಗರೇಟು ಶೇ.20ಕ್ಕೆ ಏರಿಕೆ.

ಅಂತೆಯೇ ಅಬಕಾರಿ ಸುಂಕ 2 ರೂ. ಇಳಿಕೆಯಾದ್ರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯಲ್ಲ!

ಇಳಿಕೆ:
ಗೋಡಂಬಿ ಮೇಲಿನ ಅಬಕಾರಿ ಸುಂಕ ಶೇ.5 ರಿಂದ ಶೇ.2.5ರವೆರೆಗೆ ಇಳಿಕೆಯಾಗಿದೆ. ಸೋಲಾರ್ ಉಪಕರಣಗಳ ಮೇಲಿನ ದರ ಕಡಿತಗೊಂಡಿದ್ದು, ಶ್ರವಣ ಸಾಧನಗಳ ಮೇಲಿನ ಸುಂಕ ಸಂಪೂರ್ಣ ಕಡಿತವಾಗಿದೆ. ಇಟ್ಟಿಗೆ, ಟೈಲ್ಸ್, ಸೆರಾಮಿಕ್ ವಸ್ತುಗಳ ಬೆಲೆ ಶೇ.7.5 ಇಳಿಕೆಯಾಗಲಿದೆ.

 

ಮೊಬೈಲ್ ಫೋನ್ ಬೆಲೆ ಎಷ್ಟು ಹೆಚ್ಚಾಗುತ್ತೆ?
ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಫೋನ್, ಟಿ.ವಿ ಸೆಟ್, ಡಿಜಿಟಲ್ ಕ್ಯಾಮೆರಾಗಳು, ಮೈಕ್ರೋವೇವ್ ಓವೆನ್, ಎಲ್‍ಇಡಿ ಬಲ್ಬ್ ಗಳು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗಲಿದೆ.

ಮೊಬೈಲ್ ಫೋನ್ ಮೇಲಿನ ಕಸ್ಟಮ್ ಡ್ಯುಟಿಯನ್ನು ಶೇ.15 ನಿಂದ ಶೇ.20ಕ್ಕೆ ಏರಿಸಲಾಗಿದೆ. ಹೀಗಾಗಿ ಆಮದು ಮಾಡಿಕೊಳ್ಳುವ ಆಪಲ್ ಐಫೋನ್‍ಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 3 ಸಾವಿರ ರೂ. ಹೆಚ್ಚಾಗಲಿದೆ. ಉದಾಹರಣೆಗೆ ಐಫೋನ್ ಎಕ್ಸ್ ಮಾಡಲ್‍ನ ಫೋನ್ 89 ಸಾವಿರ ರೂ. ಇದ್ದು, ಕಂಪೆನಿ ತೆರಿಗೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದರೆ ಫೋನ್ ಬೆಲೆ 92 ಸಾವಿರ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ.

ಟಿ.ವಿ ಸೆಟ್ ಬೆಲೆಗಳೂ ಕೂಡ ಏರಿಕೆಯಾಗಲಿದ್ದು, ಸ್ಕ್ರೀನ್ ಗಾತ್ರಕ್ಕೆ ಅನುಗುಣವಾಗಿ ಈಗಿರುವ ಬೆಲೆಗಿಂತ ಹೆಚ್ಚಾಗಲಿದೆ. 10 ಸಾವಿರ ರೂ. ಬೆಲೆಯ 20 ಲೀಟರ್ ಮೈಕ್ರೋವೇವ್ ಓವೆನ್ ಬೆಲೆ ಮೇಲೆ 500 ರೂ. ಹೆಚ್ಚಾಗುವ ಸಾಧ್ಯತೆಯಿದೆ.

ಆಮದು ತೆರಿಗೆ ಹೆಚ್ಚಳದಿಂದಾಗಿ ಆಪಲ್ ನಂತಹ ಸಂಸ್ಥೆಗಳು ಸ್ಥಳೀಯ ಉತ್ಪಾದನಾ ಯೋಜನೆಗಳ ವೇಗ ಹೆಚ್ಚಿಸಲಿದ್ದು, ಇದರಿಂದ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಟಿ ಸಿಕ್ಕಂತಾಗುತ್ತದೆ. ಹಾಗೂ ಸ್ಥಳೀಯ ಉತ್ಪಾದಕರಿಗೆ ಆಮದಿನಿಂದ ಹೆಚ್ಚಿನ ಸುರಕ್ಷತೆ ಸಿಕ್ಕಂತಾಗುತ್ತದೆ ಎಂದು ವರದಿಯಾಗಿದೆ.

ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಉತ್ತನ್ನಗಳ ಮೇಲಿನ ಕಸ್ಟಮ್ ಡ್ಯೂಟಿಯನ್ನು ಹೆಚ್ಚಿಸಲಾಗಿದೆ. 2017ರ ಹಣಕಾಸು ವರ್ಷದಲ್ಲಿ ಭಾರತ ಸರಿಸುಮಾರು 42 ಬಿಲಿಯನ್ ಡಾಲರ್(ಅಂದಾಜು 2 ಲಕ್ಷ ಕೋಟಿ ರೂ.) ಮೌಲ್ಯದ ಟೆಲಿಕಾಂ ವಸ್ತುಗಳು, ಕಂಪ್ಯೂಟರ್ ಹಾರ್ಡ್‍ವೇರ್, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸಾಧನಗಳನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ