ನವದೆಹಲಿ, ಮಾ.29- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲದಂತೆ ತಡೆಯಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಫೆಡರಲ್ ಫ್ರಂಟ್ (ಎಫ್ಎಫ್) ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಈ ಮಹತ್ವದ ಒಕ್ಕೂಟ ರಂಗ ರಚನೆಗೆ ಮುಂದಾಗಿರುವ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ರಣತಂತ್ರವೊಂದನ್ನು ಹಣೆದಿದ್ದಾರೆ.
ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್ ಯತ್ನಗಳು ಮುಂದುವರಿದಿರುವಾಗಲೇ ಸೋನಿಯಾ ಅವರನ್ನು ಮಮತಾ ದೆಹಲಿಯಲ್ಲಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಹೊಸ ಒಕ್ಕೂಟ ರಂಗ ಸ್ಥಾಪಿಸುವ ಬಗ್ಗೆ ಉಭಯ ನಾಯಕಿಯರು ಗಹನವಾದ ಸಮಾಲೋಚನೆ ನಡೆಸಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಗೆ ಪ್ರಾಮುಖ್ಯತೆ ನೀಡುವ ಬಗ್ಗೆಯೂ ಸೋನಿಯಾ ಮತ್ತು ದೀದಿ ಚರ್ಚಿಸಿದ್ದಾರೆ ಎಂಬುದು ಖಚಿತವಾಗಿದೆ. ಪ್ರಬಲವಾಗುತ್ತಿರುವ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಸಹಕಾರ-ಬೆಂಬಲ ನೀಡಬೇಕು. ಕೆಲವು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈ ನಿಟ್ಟಿನಲ್ಲಿ ಒಮ್ಮತದಿಂದ ಹೆಜ್ಜೆ ಇಡಲು ನೆರವು ನೀಡಬೇಕೆಂದು ಮಮತಾ ಸೋನಿಯಾರನ್ನು ಕೋರಿದ್ಧಾರೆ.
ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಮಮತಾ ಈಗಾಗಲೇ ಎನ್ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಚರ್ಚಿಸಿದ್ದಾರೆ.