ಆಸ್ಟ್ರೇಲಿಯಾ ತಂಡಕ್ಕೆ ಪ್ರಾಯೋಜಕತ್ವ ವಹಿಸಿದ್ದ ವಿಶ್ವದ ಅತಿ ದೊಡ್ಡ ಫೈನಾನ್ಸ್ ಕಂಪನಿ ಮೆಗೆಲ್ಲಾನ್ ತನ್ನ ಒಪ್ಪಂದವನ್ನು ಹಿಂದಕ್ಕೆ ಪಡೆದಿದೆ:

ಸಿಡ್ನಿ, ಮಾ. 29- ಕೇವಲ ಒಂದೇ ಒಂದು ಕಹಿ ಘಟನೆಯಿಂದ 4 ಬಾರಿ ವಿಶ್ವಕಪ್ ವಿಜೇತವಾಗಿರುವ ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸವು ಅವನತಿಯತ್ತ ಸಾಗುತ್ತಿರುವಾಗಲೇ, ಮತ್ತೊಂದು ಶಾಕ್ ಬಂದೆದರಿಗಿದೆ. ಆಸ್ಟ್ರೇಲಿಯಾ ತಂಡಕ್ಕೆ ಪ್ರಾಯೋಜಕತ್ವ ವಹಿಸಿದ್ದ ವಿಶ್ವದ ಅತಿ ದೊಡ್ಡ ಫೈನಾನ್ಸ್ ಕಂಪನಿಗಳಲ್ಲಿ ಒಂದೆನಿಸಿಕೊಂಡಿರುವ ಮೆಗೆಲ್ಲಾನ್ ತನ್ನ ಒಪ್ಪಂದವನ್ನು ಹಿಂದಕ್ಕೆ ಪಡೆದಿದೆ ಎಂದು ಮುಖ್ಯಸ್ಥ ಹಾಮೀಶ್ ಡೊಗ್‍ಲೆನ್ ತಿಳಿಸಿದ್ದಾರೆ.
2017ರಲ್ಲಿ ಆಸೀಸ್ ಸರಣಿ ನಡೆಯುವ ವೇಳೆ 3 ವರ್ಷಗಳ ಅವಧಿಗೆ 20 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‍ಗಳಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ಈಗ ಚೆಂಡು ವಿರೂಪ ಪ್ರಕರಣದಿಂದಾಗಿ ತಮ್ಮ ಫೈನಾನ್ಸ್ ಸಂಸ್ಥೆಗೆ ಕಳಂಕ ತಟ್ಟದಿರಲೆಂಬ ಉದ್ದೇಶದಿಂದ ಒಪ್ಪಂದವನ್ನು ಹಿಂದಕ್ಕೆ ಪಡೆದಿದ್ದೇವೆ ಎಂದು ಹಾಮೀಶ್ ಡೊಗ್‍ಲೆನ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಮೆಗೆಲ್ಲಾನ್ ತನ್ನ ಪ್ರಾಯೋಜಕತ್ವವನ್ನು ಹಿಂಪಡೆದರೂ ಕೂಡ ಕ್ವಾಂಟಾಸ್, ಕಾಮನ್‍ವೆಲ್ತ್ ಬಾಂಕ್ ಇದುವರೆಗೂ ಯಾವುದೇ ತೀರ್ಮಾನಕ್ಕೂ ಬಂದಿಲ್ಲ, ಒಂದು ವೇಳೆ ಅವು ಕೂಡ ತಮ್ಮ ಒಪ್ಪಂದವನ್ನು ರದ್ದುಗೊಳಿಸಿದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಭಾರೀ ನಷ್ಟವುಂಟಾಗಲಿದೆ.
ಕಳಂಕಿತರಿಗೂ ಭಾರೀ ಲಾಸ್:
ಆಸ್ಟ್ರೇಲಿಯಾ ತಂಡದೊಂದಿಗೆ ಒಪ್ಪಂದವನ್ನು ಮೆಗೆಲ್ಲಾನ್ ಹಿಂಪಡೆದ ಬೆನ್ನ ಹಿಂದೆಯೇ ಕ್ರೀಡಾಲೋಕದ ಅತ್ಯಂತ ಶ್ರೀಮಂತಿಕೆ ಸಂಸ್ಥೆಯಾದ ಎಎಸ್‍ಐಸಿಎಸ್ ಕೂಡ ಕಳಂಕಿತರಾದ ಡೇವಿಡ್ ವಾರ್ನರ್, ಕೆಮ್ರೂನ್ ಬ್ಯಾನ್‍ಕ್ರೋಫ್ಟ್ ಸೇರಿದಂತೆ ಮೋಸದಾಟದಲ್ಲಿ ಪಾಲ್ಗೊಂಡಿರುವ ಎಲ್ಲ ಆಟಗಾರರೊಂದಿಗೆ ಒಪ್ಪಂದವನ್ನು ರದ್ದುಗೊಳಿಸಿದೆ. ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರತಿಷ್ಠಿತ ಸಂಸ್ಥೆ ಎಲ್‍ಜಿ ಸಂಸ್ಥೆಯು ಕೂಡ ತಮ್ಮ ಸಂಸ್ಥೆಯ ರಾಯಭಾರಿಯಾಗಿದ್ದ ಡೇವಿಡ್‍ವಾರ್ನರ್‍ರೊಂದಿಗೆ ಒಡಂಬಡಿಕೆಯನ್ನು ಹಿಂಪಡೆದಿದ್ದೇವೆ ಎಂದು ಟ್ವೀಟರ್ ಮೂಲಕ ತಿಳಿಸಿವೆ.
ಕ್ಷಮೆ ಯಾಚಿಸಿದ ವಾರ್ನರ್:
ನನ್ನ ಬಾಲ್ಯಜೀವನದಿಂದಲೂ ನನಗೆ ಕ್ರಿಕೆಟ್ ಅಂದರೆ ಪಂಚಪ್ರಾಣ. ಆದರೆ ಈಗ ಅದೇ ರಂಗಕ್ಕೆ ಕಪ್ಪುಚುಕ್ಕೆ ಬರುವಂತೆ ನಡೆದುಕೊಂಡು ತೀವ್ರ ಬೇಸರ ತರಿಸಿದೆ ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಚೆಂಡು ವಿರೂಪ ಪ್ರಕರಣದ ಪ್ರಮುಖ ಆರೋಪಿ ಎನಿಸಿಕೊಂಡಿರುವ ಡೇವಿಡ್ ವಾರ್ನರ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ