ಮತಯಂತ್ರ ಪ್ರಾತ್ಯಕ್ಷಿಕೆ ವೇಳೆ ತಾಂತ್ರಿಕ ದೋಷದ ಕುರಿತು ಸಮಗ್ರ ವರದಿಗೆ ಸೂಚನೆ

ಬೆಂಗಳೂರು, ಮಾ.29-ಮತಯಂತ್ರ ಪ್ರಾತ್ಯಕ್ಷಿಕೆ ವೇಳೆ ರಾಯಚೂರಿನಲ್ಲಿ ಕಂಡುಬಂದಿರುವ ತಾಂತ್ರಿಕ ದೋಷದ ಕುರಿತು ಸಮಗ್ರ ವರದಿ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಇಎಲ್‍ನ ತಂತ್ರಜ್ಞರ ತಂಡಕ್ಕೆ ಸೂಚನೆ ನೀಡಿದೆ.

ನಿನ್ನೆ ರಾಯಚೂರಿನಲ್ಲಿ ವಿವಿಪ್ಯಾಟ್ ಹಾಗೂ ಮತಯಂತ್ರಗಳ ಪ್ರಾತ್ಯಕ್ಷಿಕೆ ವೇಳೆ ಕೆಲ ಗೊಂದಲಗಳು ಉಂಟಾಗಿದ್ದವು. ಈ ಕುರಿತು ಅಲ್ಲಿನ ಜಿಲ್ಲಾಧಿಕಾರಿ ಬಗಾದಿಗೌತಮ್ ಅವರು ವರದಿ ನೀಡಿದ್ದು, ಮತಯಂತ್ರದಲ್ಲಾಗಲಿ, ವಿವಿಪ್ಯಾಟ್ ಯೂನಿಟ್‍ನಲ್ಲಾಗಲಿ ಯಾವುದೇ ದೋಷಗಳಿಲ್ಲ. ಅದರ ನಿರ್ವಹಣೆಯಲ್ಲಿ ತೊಡಕಾಗಿರುವುದರಿಂದ ಗೊಂದಲ ಉಂಟಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ವಿವರಣೆ ನೀಡಿದ್ದಾರೆ. ಇದು ಅತ್ಯಂತ ಸೂಕ್ಷ್ಮ ವಿಚಾರ ಆಗಿರುವುದರಿಂದ ಚುನಾವಣಾ ಆಯೋಗವು ಇನ್ನಷ್ಟು ಸವಿಸ್ತಾರ ವರದಿಯನ್ನು ಕೇಳಿದೆ.

ಆಯೋಗದ ಸೂಚನೆ ಮೇರೆಗೆ ಬಿಇಎಲ್‍ನ ಇಂಜಿನಿಯರ್‍ಗಳ ತಂಡ ರಾಯಚೂರಿಗೆ ತೆರಳಿ ಪರಿಶೀಲನೆ ನಡೆಸಿದೆ. ಬಹುತೇಕ ಇಂದು ಸಂಜೆ ಒಳಗಾಗಿ ಗೊಂದಲಕ್ಕೆ ಸಂಬಂಧಿಸಿದಂತೆ ವರದಿ ಆಯೋಗದ ಕೈ ಸೇರುವ ಸಾಧ್ಯತೆಗಳಿವೆ.

ಮೇಲ್ನೋಟಕ್ಕೆ ಮತಯಂತ್ರ ಸಮರ್ಪಕವಾಗಿ ಕೆಲಸ ಮಾಡಿದೆ. 38 ಮತಗಳು ಚಲಾವಣೆಯಾಗಿದ್ದು, ಚಲಾವಣೆಯಾದ ಮತಗಳು ನಿರ್ದಿಷ್ಟ ಗುರುತು/ಚಿಹ್ನೆಗೆ ಸಲ್ಲಿಕೆಯಾಗಿವೆ. ಆದರೆ, ವಿವಿ ಪ್ಯಾಟ್‍ನಲ್ಲಿ ತೋರಿಸುವಾಗ ಒಂದು ಮತ ತಪ್ಪು ಮಾಹಿತಿ ನೀಡಿದೆ. ಅದು ತಾಂತ್ರಿಕ ಸಮಸ್ಯೆ ಹಾಗೂ ನಿರ್ವಹಣೆ ಕೊರತೆಯಿಂದ ಆಗಿರುವ ಲೋಪ. ಮತಯಂತ್ರದ ದೋಷವಲ್ಲ ಎಂದು ಕಂಡು ಬಂದಿದೆ ಎಂದು ಹೇಳಲಾಗಿದೆ.

ಆಯೋಗ ಯಾವುದೇ ಗೊಂದಲಕ್ಕೆ ಅವಕಾಶಗಳಿಲ್ಲದೆಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಭಾಗಗಳಿಂದ ದೂರು ಬಂದರೂ ತಕ್ಷಣವೇ ಮತಯಂತ್ರ ಬದಲಾಯಿಸಲು ಮತ್ತು ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದೆ ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸುವೆ.
ಯಾವ್ಠುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಕಲ ಸಿದ್ದತೆಗಳನ್ನು ತೆಗೆದುಕೊಂಡಿರುವುದಾಗಿ ಆಯೋಗ ಭರವಸೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ