ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಸೋರಿಕೆ ಪ್ರಕರಣ: ಇಸಿಐನ ಅಧಿಕಾರಿಗಳ ಸಮಿತಿ ತನಿಖೆ ಚುರುಕು

ನವದೆಹಲಿ, ಮಾ.29- ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ ಪ್ರಕಟಿಸುವುದಕ್ಕೆ ಮುನ್ನವೇ ಅದು ಸೋರಿಕೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಸಿಐನ ಅಧಿಕಾರಿಗಳ ಸಮಿತಿ ತನಿಖೆ ಚುರುಕುಗೊಳಿಸಿದೆ.
ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಸಮಿತಿಯು ನಿನ್ನೆ ರಾಜಧಾನಿ ನವದೆಹಲಿಯಲ್ಲಿ ಸಭೆ ನಡೆಸಿ ಈವರೆಗೆ ಸಂಗ್ರಹಿಸಲಾದ ಮಾಹಿತಿ ಮತ್ತು ತನಿಖಾ ಪ್ರಗತಿ ಬಗ್ಗೆ ಪರಾಮರ್ಶೆ ನಡೆಸಿತು.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್ ಮಾ.26ರಂದು ದೆಹಲಿಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸುವುದಕ್ಕೂ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಐಟಿ ಸೆಲ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿತ್ತು. ಇದನ್ನು ಆಧರಿಸಿ ಕೆಲವು ಮಾಧ್ಯಮಗಳೂ ಆ ದಿನಾಂಕದ ವರದಿಯನ್ನು ಬಿತ್ತರಿಸಿದ್ದವು.
ಈ ಬಗ್ಗೆ ವ್ಯಾಪಕ ದೂರುಗಳು ಬಂದ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿದ ಇಸಿಐ ತನಿಖೆಗಾಗಿ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿತ್ತು.
ಸಮಿತಿಯು ಈ ಸಂಬಂಧ ಸಂಬಂಧಪಟ್ಟವರಿಗೆ ನೋಟಿಸ್‍ಗಳನ್ನು ಜಾರಿಗೊಳಿಸಿ ಪ್ರತ್ಯುತ್ತರಗಳನ್ನು ನೀಡುವಂತೆ ಕೋರಿತ್ತು.
ಎಲೆಕ್ಷನ್ ಡೇಟ್‍ಗಳನ್ನು ಮೊದಲು ಪ್ರಕಟಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಕರ್ನಾಟಕ ಉಸ್ತವಾರಿ ವೈ.ಬಿ.ಶ್ರೀವತ್ಸ, ಟೈಮ್ಸ್ ನೌ ಟಿವಿ ಚಾನೆಲ್ ಹಾಗೂ ಸುವರ್ಣ ನ್ಯೂಸ್ ಚಾನೆಲ್‍ಗಳಿಗೆ ನೋಟಿಸ್‍ಗಳನ್ನು ಜಾರಿಗೊಳಿಸಲಾಗಿತ್ತು. ಇದಕ್ಕೆ ಪ್ರತ್ಯುತ್ತರಗಳು ಸ್ವೀಕಾರವಾಗಿದ್ದು, ಅವುಗಳನ್ನು ಪರಿಶೀಲಿಸಿ ಸಮಿತಿ ಮುಂದಿನ ಕ್ರಮ ಕೈಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ