ಶ್ರೀಹರಿಕೋಟ: ಮಾ-29: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷಿ ಸಂವಹನ ಉಪಗ್ರಹ ‘ಜಿಸ್ಯಾಟ್-6ಎ’ಯನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದೆ.
ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ನೀಡಬಲ್ಲ, ಸ್ವದೇಶಿ ನಿರ್ಮಿತ ಜಿಎಸ್ಎಲ್ವಿ-ಎಫ್-08 ರಾಕೆಟ್ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಿತು.
ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ ಜಿಎಸ್ ಎಲ್ ವಿ-ಎಫ್ 08 ರಾಕೆಟ್ ಈ ಉಪಗ್ರಹವನ್ನು ಇಂದು ಕಕ್ಷೆಗೆ ಸೇರಿಸಲಿದೆ.ಅತ್ಯಾಧುನಿಕ ಮಾದರಿಯ ಎಸ್-ಬ್ಯಾಂಡ್ ಸಂವಹನ ಉಪಗ್ರಹ ಹೊಂದಿರುವ ಜಿಸ್ಯಾಟ್- 6ಎ 2,140 ಕೆ.ಜಿ. ತೂಕ ಹೊಂದಿದೆ. ಜಿಎಸ್ಎಲ್ವಿ ಸರಣಿಯ 12ನೇ ರಾಕೆಟ್ ಮತ್ತು ದೇಶೀಯ ನಿರ್ವಿುತ ಕ್ರಯೋಜನಿಕ್ ಸ್ಟೇಜ್ ತಂತ್ರಜ್ಞಾನ ಹೊಂದಿರುವ 6ನೇ ರಾಕೆಟ್ ಇದಾಗಿದೆ.
ಆಂಧ್ರ ಪ್ರದೇಶದ ಸತೀಶ್ ಧವನ್ ಸ್ಪೇಸ್ ಸೆಂಟರ್ನ ಎರಡನೇ ಲಾಂಚ್ ಪ್ಯಾಡ್ನಿಂದ ಉಡಾವಣೆಗೊಳ್ಳುವ ಈ ಉಪಗ್ರಹ ಸಂವಹನ ವ್ಯವಸ್ಥೆಯನ್ನು ಬಲಪಡಿಸಲಿದೆ. ಈ ಮೊದಲು ಉಡಾವಣೆಯಾಗಿರುವ ಸಂವಹನ ಉಪಗ್ರಹ ಜಿಸ್ಯಾಟ್- 6 ಮಾದರಿಯಲ್ಲೇ ಬಲಿಷ್ಟ ಎಸ್ ಬ್ಯಾಂಡ್ ಬೆಂಬಲ ಹೊಂದಿದೆ. 2,132 ಕೆ.ಜಿ. ತೂಕವಿದ್ದ ಜಿಸ್ಯಾಟ್- 6 ಉಪಗ್ರಹವನ್ನು 2015ರ ಆಗಸ್ಟ್ 27ರಂದು ಜಿಎಸ್ಎಲ್ವಿ ಎಂಕೆ-2 ಡಿ6 ರಾಕೆಟ್ ಬಳಸಿ ಉಡಾಯಿಸಲಾಗಿತ್ತು. ಜಿಎಸ್ಯಾಟ್- 6ಎ ಉಪಗ್ರಹದ ಜೀವಿತಾವಧಿ 10 ವರ್ಷಗಳಾಗಿವೆ.
ವಿದ್ಯುದಯಸ್ಕಾಂತ ಮಾದರಿಯ 2ರಿಂದ 4 ಗಿಗಾ ಹರ್ಟ್ಸ್ ವರೆಗಿನ ತರಂಗಗಳನ್ನು ಈ ಉಪಗ್ರಹ ಸೃಷ್ಟಿಸುವ ಸಾಮರ್ಥ್ಯಹೊಂದಿದ್ದು, ಅಲ್ಟ್ರಾ ಹೈ ಫ್ರೀಕ್ವೆನ್ಸಿ (ಯುಎಚ್ಎಫ್) ಹಾಗೂ ಸೂಪರ್ ಹೈ ಫ್ರೀಕ್ವೆನ್ಸಿ (ಎಸ್ಎಚ್ಎಫ್) ನಡುವಿನ ಬ್ಯಾಂಡ್ಗಳ ತರಂಗಾಂತರ ಹೊರಹೊಮ್ಮಿಸುವ ಸಾಮರ್ಥ್ಯವುಳ್ಳದ್ದಾಗಿದೆ. ಭವಿಷ್ಯದಲ್ಲಿ ಉಪಗ್ರಹ ಆಧಾರಿತ ಮೊಬೈಲ್ ಸಂವಹನ ಯೋಜನೆಗಳಿಗೆ ಮತ್ತು ಅಪ್ಲಿಕೇಶನ್ಗಳಿಗೆ ಬೆಂಬಲ ನೀಡುವ 6ಎಂ ಎಸ್- ಬ್ಯಾಂಡ್ ಆಧಾರಿತ ಜಿಸ್ಯಾಟ್- 6ಎ ಉಪಗ್ರಹ, ನೆಟ್ವರ್ಕ್ ನಿರ್ವಹಣೆಯ ತಂತ್ರಜ್ಞಾನ ಹೊಂದಿದೆ.
ಇದೊಂದು 6 ಮೀ. ಉದ್ದದ ಎಸ್- ಬ್ಯಾಂಡ್ “ಸ್ವಯಂ ಚಾಲಿತ’ ಹರಡಿ ಕೊಳ್ಳುವ ಆ್ಯಂಟೆನಾ ಇದರ ವಿಶೇಷ. ಉಪಗ್ರಹವು ಕಕ್ಷೆಗೆ ಸೇರುತ್ತಲೇ ಇದು ಹರಡಿಕೊಳ್ಳುತ್ತದೆ. ಈವರೆಗೆ ಇಸ್ರೋ ಅಳವಡಿಸಿರುವ ಆ್ಯಂಟೆನಾಗಳಿಗಿಂತ ಮೂರು ಪಟ್ಟು ದೊಡ್ಡದಾಗಿದೆ.
ಈ ಉಪಗ್ರಹ ಉಡಾವಣೆ ಮೂಲಕ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವುದು, ಭವಿಷ್ಯದ ಸಂವಹನ ತಂತ್ರಜ್ಞಾನಗಳಿಗೆ ವೇದಿಕೆ ಕಲ್ಪಿಸುವುದು. ನಿಸ್ತಂತು ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವುದು ಮತ್ತು ಭಾರತೀಯ ಸೇನೆಗೆ ಅತ್ಯಾಧುನಿಕ ಸಂವಹನ ವ್ಯವಸ್ಥೆ ನೀಡುವುದು ಈ ಉಡಾವಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಇಸ್ರೋ ತಿಳಿಸಿದೆ.
ಈ ಉಪಗ್ರಹ ನಿರ್ಮಾಣಕ್ಕಾಗಿ ಇಸ್ರೋ ಒಟ್ಟು 270 ಕೋಟಿ ರೂ ನಿರ್ಮಾಣ ವೆಚ್ಚ ಮಾಡಿದೆ. ಜಿಎಸ್ ಎಲ್ ವಿ-ಎಫ್ 08 ರಾಕೆಟ್ 161ಅಡಿ ಎತ್ತರವಿದೆ. ಈ ರಾಕೆಟ್ ಗೆ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದ್ದು, ಇದರ ಇಂಧನ ದಕ್ಷತೆ ಈ ಹಿಂದಿನ ರಾಕೆಟ್ ಗಳಿಗಿಂತಲೂ ಉತ್ತಮವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ISRO,GSAT 6A ,GSLV Mk-II,Successfully Launch