
ಬೆಂಗಳೂರು, ಮಾ.29-ಅನಾರೋಗ್ಯಕ್ಕೆ ತುತ್ತಾಗಿದ್ದ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭೆರಸಂದ್ರ ಗಂಗರಾಜು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ನವೆಂಬರ್ 14ರಂದು ಕಂದಾಯ ಭವನದಲ್ಲಿರುವ ಪತ್ರಕರ್ತರ ಸಂಘದ ಕಚೇರಿಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪಾಶ್ರ್ವವಾಯುಗೆ ತುತ್ತಾಗಿದ್ದ ಗಂಗರಾಜು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಾಶ್ರ್ವವಾಯುವಿನಿಂದ ಚೇತರಿಸಿಕೊಂಡಿದ್ದ ಗಂಗರಾಜು ಅವರನ್ನು ಹುಟ್ಟೂರಾದ ಭೆರಸಂದ್ರಪಾಳ್ಯಕ್ಕೆ ಕರೆದೊಯ್ಯಲಾಗಿತ್ತು. ಕೆಲ ದಿನಗಳ ಹಿಂದೆ ಗಂಗರಾಜು ಅವರನ್ನು ಅಂಚೆಪಾಳ್ಯದಲ್ಲಿರುವ ಮಂಜುನಾಥ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಅವರು ಚೇತರಿಸಿಕೊಂಡಿದ್ದರು.
ಆದರೆ, ಇದ್ದಕ್ಕಿದ್ದಂತೆ ಮತ್ತೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಮುಂಜಾನೆ ಗಂಗರಾಜು ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ: ಗಂಗರಾಜು ಅವರ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟ, ಪ್ರೆಸ್ಕ್ಲಬ್, ಹಿರಿಯ ಪತ್ರಕರ್ತರ ಒಕ್ಕೂಟ ಮತ್ತಿತರ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.