ರಾಜಕೀಯ ಮುಖಂಡರಿಂದ ಜ್ಯೋತಿಷಿUಳ ಮೊರೆ; ಎಲ್ಲಿಲ್ಲದ ಬೇಡಿಕೆ

ಬೆಂಗಳೂರು, ಮಾ.29- ರಾಜ್ಯ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೆ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಒಂದೆಡೆ ತೊಡಗಿದ್ದರೆ, ಮತ್ತೊಂದೆಡೆ ಬಿರುಸಿನ ಪ್ರಚಾರ ಕೈಗೊಳ್ಳಲಾಗುತ್ತಿದೆ. ಈ ನಡುವೆ ಕೆಲವು ಮುಖಂಡರು ಹಾಗೂ ಸ್ಪರ್ಧಾಕಾಂಕ್ಷಿಗಳು ಜ್ಯೋತಿಷಿಗಳ ಮೊರೆ ಹೋಗಿದ್ದು, ಜ್ಯೋತಿಷಿಗಳಿಗೆ ಎಲ್ಲಿಲ್ಲದ ಬೇಡಿಕೆಯುಂಟಾಗಿದೆ.

ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಮಂಗಳವಾರವೇ ಪ್ರಕಟಿಸಿದ್ದು, ಚುನಾವಣಾ ಫಲಿತಾಂಶವೂ ಮಂಗಳವಾರವೇ ಅಮಾವಾಸ್ಯೆ ದಿನ ಪ್ರಕಟವಾಗುವುದರಿಂದ ಜ್ಯೋತಿಷ್ಯದಲ್ಲಿ ಹೆಚ್ಚು ನಂಬಿಕೆಯುಳ್ಳ ರಾಜಕಾರಣಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸಂಕಟ ಪರಿಹಾರಕ್ಕಾಗಿ ಜ್ಯೋತಿಷಿಗಳ ಮೊರೆ ಹೋಗಿದ್ದು, ಹೋಮ, ಹವನದ ಜತೆಗೆ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದಾರೆ.

ಅಲ್ಲದೆ, ಕೆಲವೊಂದು ರಾಜಕೀಯ ಮುಖಂಡರು ಯಂತ್ರ-ತಂತ್ರ-ಮಂತ್ರಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ರಾಜ್ಯದ ಜ್ಯೋತಿಷಿಗಳಲ್ಲದೆ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶಗಳ ಜ್ಯೋತಿಷಿಗಳ ಬಳಿ ದುಂಬಾಲು ಬಿದ್ದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ನಾಮಪತ್ರವನ್ನು ಯಾವ ದಿನ, ಯಾವ ಗಳಿಗೆಯಲ್ಲಿ ಸಲ್ಲಿಸಬೇಕು ಎಂಬುದರಿಂದ ಹಿಡಿದು ಚುನಾವಣಾ ಪ್ರಚಾರ ಆರಂಭ ಮೊದಲಾದವುಗಳ ಬಗ್ಗೆ ಜ್ಯೋತಿಷಿಗಳ ಮಾರ್ಗದರ್ಶನ ಪಡೆಯಲು ಮುಂದಾಗಿದ್ದಾರೆ. ಕೆಲವರು ಮನೆ ದೇವರು, ಗ್ರಾಮದ ದೇವರ ಮೊರೆ ಹೋಗಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಕಾಂಕ್ಷಿಗಳಲ್ಲಿ ಮೂಢನಂಬಿಕೆ, ಮೌಢ್ಯಾಚರಣೆ ವಿರೋಧಿಸುವ ಬಹಳಷ್ಟು ಮಂದಿ ಇದ್ದಾರೆ. ಆದರೆ, ಜ್ಯೋತಿಷಿಗಳು ನೀಡುವ ಸಲಹೆ-ಸೂಚನೆಯನ್ನು ಪಾಲಿಸುವ ಹಲವು ಸ್ಪರ್ಧಾಕಾಂಕ್ಷಿಗಳು ಇದ್ದಾರೆ. ಹೀಗಾಗಿ ಕರ್ನಾಟಕ ಸೇರಿದಂತೆ ನೆರೆಹೊರೆಯ ರಾಜ್ಯಗಳ ಜ್ಯೋತಿಷಿಗಳಿಗೆ, ಮಂತ್ರವಾದಿಗಳಿಗೆ, ಯಜ್ಞ-ಯಾಗ ಮಾಡುವವರಿಗೆ ಹಾಗೂ ಪ್ರಮುಖ ದೇವಾಲಯಗಳ ಅರ್ಚಕರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಪ್ರತಿಯೊಂದು ವಿಚಾರಕ್ಕೂ ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುವ ರಾಜಕಾರಣಿಗಳು ಈ ವಿಚಾರದಲ್ಲಿ ಸದ್ದುಗದ್ದಲವಿಲ್ಲದೆ ರಹಸ್ಯವಾಗಿ ಜ್ಯೋತಿಷಿಗಳನ್ನು, ಮಂತ್ರವಾದಿಗಳನ್ನು ಭೇಟಿ ಮಾಡಿ ತಮ್ಮ ಗೆಲುವಿಗೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸಲಹೆ ಪಡೆಯುತ್ತಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ಯಾವ ಯಾವ ಪೂಜೆ ಮಾಡಿಸಬೇಕು, ವಿಘ್ನ ನಿವಾರಣೆ ಹೇಗೆ, ಯಾವ ಯಾವ ದೇವರ ಮೊರೆ ಹೋಗಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವ ರಾಜಕಾರಣಿಗಳು ಇದ್ದಾರೆ.
ಒಟ್ಟಾರೆ, ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರತೊಡಗಿದಂತೆ ಜ್ಯೋತಿಷಿಗಳ ಮೊರೆ ಹೋಗುವವರ ಸಂಖ್ಯೆಯೂ ಹೆಚ್ಚತೊಡಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ