ಚಿಕ್ಕಬಳ್ಳಾಪುರ, ಮಾ.27- ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾಭಿಪ್ರಾಯದಂತೆ ನಾವು ಮುಂದಿನ ಅವಧಿಗೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಬಿಜೆಪಿಯವರು ಮಾತ್ರ ಹತಾಶರಾಗಿ ಅವರೇ ಅಧಿಕಾರ ಹಿಡಿಯುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಇಂತಹ ಹತಾಶೆಯಿಂದಲೇ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿ.ಟಿ.ದೇವೇಗೌಡ ಮಾಡಿರುವ ಆರೋಪದ ಕುರಿತಂತೆ ಕೇಳಿದ ಪ್ರಶ್ನೆಗೆ, ನಾವು ಇಂತಹ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಉತ್ತರಿಸಿದರು.
ಮಾ.23ರ ನಂತರ ಯಾವುದೇ ಸಮಯದಲ್ಲಾದರೂ ಚುನಾವಣೆ ಘೋಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಇಂದು ಚುನಾವಣೆ ದಿನಾಂಕ ನಿಗದಿಯಾಗಿದೆ. ನಾವು ಅದನ್ನು ಸ್ವಾಗತಿಸುತ್ತೇವೆ ಎಂದರು.
ಚುನಾವಣಾ ದಿನಾಂಕ ನಿಗದಿ ಯಾದರೂ ಅಧಿಸೂಚನೆ ಪ್ರಕಟವಾದ ನಂತರ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಆದರೆ, ನಾವು ಚುನಾವಣಾ ಆಯೋಗಕ್ಕೆ ಗೌರವ ಕೊಟ್ಟು ಇಂದು ನಡೆಯಬೇಕಿದ್ದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ನಿರ್ಮಿಸಲಾಗಿರುವ ಮೆಘಾ ಡೈರಿಯ ಉದ್ಘಾಟನೆಯನ್ನು ನೆರವೇರಿಸಿಲ್ಲ ಎಂದು ತಿಳಿಸಿದರು.