
ಬೆಂಗಳೂರು, ಮಾ.26- ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆಪ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕನಕಪುರ ಸಿಟಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ದಾಳಿ ನಡೆದಾಗ ಅವರು ಆಪ್ತರು ಕೆಲವು ದಾಖಲೆ ಪತ್ರ ಹಾಗೂ ಹಣ, ಚಿನ್ನಾಭರಣಗಳನ್ನು ಗೌರಮ್ಮ ಅವರ ಮನೆಯಲ್ಲಿ ಅಡಗಿಸಿಟ್ಟಿದ್ದರು ಎಂದು ಹೇಳಲಾಗಿದೆ.
ಆನಂತರ ತಾವು ಇಟ್ಟಿದ್ದ ಹಣಕ್ಕೂ, ಗೌರಮ್ಮ ಕುಟುಂಬ ವಾಪಸ್ ನೀಡಿದ ಹಣ ಮೊತ್ತಕ್ಕೂ ವ್ಯತ್ಯಾಸ ಕಂಡುಬಂದಿದ್ದು, ವ್ಯತ್ಯಾಸದ ಹಣ ವಾಪಸ್ ನೀಡುವಂತೆ ನಗರ ಪಾಲಿಕೆ ಅಧ್ಯಕ್ಷ ದಿಲೀಪ್, ಗೆಂಡೆಕೆರೆ ಶ್ರೀನಿವಾಸ್, ರವಿ, ಧನಂಜಯ, ಪಿಎಸ್ಐ ನಟರಾಜ್ ಅವರುಗಳು ಗೌರಮ್ಮ ಕುಟುಂಬವನ್ನು ರೆಸಾರ್ಟ್ನಲ್ಲಿ ಕೂಡಿ ಹಾಕಿ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಲಾಗಿತ್ತು.
ಘಟನೆ ನಂತರ ಗೌರಮ್ಮ ಕುಟುಂಬ ರಾಜ್ಯಪಾಲ ಕಚೇರಿ, ಸಿದ್ದರಾಮಯ್ಯ ಅವರ ಕಚೇರಿ ಸೇರಿದಂತೆ ಹಲವಾರು ಕಡೆ ಅಲೆದಾಡಿದರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು.
ನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸೂಚಿಸಿದೆ.
ಪ್ರಕರಣದಲ್ಲಿ ಕನಕಪುರ ನಗರ ಠಾಣೆಯ ಪಿಎಸ್ಐ ಅವರ ಹೆಸರು ಸೇರ್ಪಡೆಯಾಗಿರುವುದರಿಂದ ವಿಚಾರಣೆಯನ್ನು ಕನಕಪುರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಕನಕಪುರ ಸಿಟಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶನೀಡಿದ್ದು, ಐಪಿಸಿ ಸೆಕ್ಷನ್ 323, 324, 342, 343, 344, 364, 354 ಮತ್ತು 504 ರಡಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದೆ.
ಘಟನೆ ವಿವರ: ಐಟಿ ದಾಳಿ ಪ್ರಕರಣಕ್ಕೂ, ಗೌರಮ್ಮ ಅವರ ಕುಟುಂಬದ ಮೇಲಿನ ದಾಳಿಗೂ ತಾಳೆ ಹಾಕಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿದ್ದಂತೆ ಅವರ ಆಪ್ತರು, ತಮ್ಮ ಮನೆಯ ಮೇಲೂ ದಾಳಿ ನಡೆಯಬಹುದೆಂಬ ಆತಂಕದಿಂದ ಹಣ ಹಾಗೂ ಒಡವೆಗಳನ್ನು ಬಚ್ಚಿಡುವ ಪ್ರಯತ್ನ ಮಾಡಿದ್ದರು. ಅಂತಹ ಪ್ರಯತ್ನದ ಭಾಗವಾಗಿ ಗೌರಮ್ಮ ಮನೆಯಲ್ಲೂ ಅಕ್ರಮವಾಗಿ ಸಂಪತ್ತನ್ನು ಮುಚ್ಚಿಡಲಾಗಿತ್ತು. ಮುನ್ನೆಚ್ಚರಿಕೆಯಾಗಿ ರವಿ ಎಂಬುವರು ಗೌರಮ್ಮ ಅವರ ಜಮೀನನ್ನು ತಮ್ಮ ಹೆಸರಿಗೆ ಕ್ರಯಪತ್ರ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸ್ವಲ್ಪ ದಿನದ ನಂತರ ಅಕ್ರಮ ಸಂಪತ್ತನ್ನು ವಾಪಸ್ ಪಡೆದಾಗ ಅದು ಕಡಿಮೆಯಿತ್ತು ಎಂದು ಹೇಳಲಾಗಿದೆ. ಉಳಿದ ಹಣ ವಸೂಲಿಗಾಗಿ ಡಿ.ಕೆ.ಶಿವಕುಮಾರ್ ಅವರ ಆಪ್ತರು ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ.
ಮೊದಲು ದಂಡೆಗೆರೆ ಶ್ರೀನಿವಾಸ್ ಅವರು ಗೌರಮ್ಮ ಅವರನ್ನು ರೆಸಾರ್ಟ್ಗೆ ಕರೆದೊಯ್ದಿದ್ದು, ಅಲ್ಲಿ ಪಿಎಸ್ಐ ನಟರಾಜ್ ಗೌರಮ್ಮ ಅವರ ಮೇಲೆ ಹಲ್ಲೆ ಮಾಡಿದ್ದು, ಅವರ ಪತಿ ಮೇಲೂ ಹಲ್ಲೆ ಮಾಡಿದ್ದಾರೆ ಹಾಗೂ ಪುತ್ರ ಪ್ರಶಾಂತ್ ಹಾಗೂ ಗೌರಮ್ಮ ಸಹೋದರನ ಮೇಲೆ ಹಲ್ಲೆ ನಡೆದಿತ್ತು ಎಂದು ಆರೋಪಿಸಲಾಗಿದೆ.
ಈ ಘಟನೆ ಬಗ್ಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಗೌರಮ್ಮ ಕುಟುಂಬ ಕೋರ್ಟ್ ವೆÅಟ್ಟಿಲೇರಿದ್ದು, ತೀರ್ಪು ಬಂದು ಹಲವು ದಿನಗಳಾದರೂ ಪೆÇಲೀಸರು ಇನ್ನೂ ಕ್ರಮಕೈಗೊಂಡಿಲ್ಲ ಎಂದು ಗೌರಮ್ಮ ಆರೋಪಿಸಿದ್ದಾರೆ.
ಅಂದು ತಮ್ಮ ಮೇಲೆ ನಟರಾಜ್ ಹಲ್ಲೆ ನಡೆಸಿದ್ದರು. ತಮ್ಮ ಪತಿ ಮೇಲೂ ಹಲ್ಲೆ ನಡೆಸಿದ್ದಲ್ಲದೆ, ಕೇಸು ಹಾಕಿ ಜೈಲಿಗಟ್ಟುವುದಾಗಿ ಬೆದರಿಕೆ ಹಾಕಿದ್ದು, ತಮ್ಮ ಕುಟುಂಬದ ಸದಸ್ಯರ ಬಟ್ಟೆ ಬಿಚ್ಚಿ ಥಳಿಸಲಾಗಿತ್ತು ಎಂದು ಗೌರಮ್ಮ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಗೌರಮ್ಮ ಪುತ್ರ ಪ್ರಶಾಂತ್ ಮಾತನಾಡಿ, ಕೋರ್ಟ್ ತೀರ್ಪು ಸ್ವಾಗತಾರ್ಹ. ಆದರೆ ಪ್ರಕರಣದ ವಿಚಾರಣೆಯನ್ನು ಕನಕಪುರ ಗ್ರಾಮಾಂತರ ಪೆÇಲೀಸ್ ಠಾಣೆಗೆ ವಹಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಎರಡು ಠಾಣೆಯ ವ್ಯಾಪ್ತಿಗೆ ಬರುವುದು ಸರ್ಕಲ್ ಇನ್ಸ್ಪೆಕ್ಟರ್ ಮಲ್ಲೇಶ್ ಅವರಿಗೆ. ಹೀಗಾಗಿ ಗ್ರಾಮಾಂತರ ಠಾಣೆಯ ಪೆÇಲೀಸರ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ.
ತಮ್ಮ ಮೇಲೆ ಹಲ್ಲೆ ಮಾಡಿರುವುದು ಡಿಕೆ ಶಿವಕುಮಾರ್ ಅವರ ಆಪ್ತರು. ಈ ಘಟನೆ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಬಂದಿದೆಯೇ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಈವರೆಗೂ ಅವರು ಯಾವುದೇ ಮಾತುಕತೆ ನಡೆಸಿಲ್ಲ. ತಮ್ಮೊಂದಿಗೂ ಚರ್ಚೆ ಮಾಡಿಲ್ಲ. ಒಂದು ವೇಳೆ ಅವರ ಗಮನಕ್ಕೆ ಈ ವಿಷಯ ಬಂದರೆ ನಮಗೆ ನ್ಯಾಯ ಸಿಗಬಹುದು ಎಂದು ಪ್ರಶಾಂತ್ ಹೇಳಿದ್ದಾರೆ.