ಹಾಲಿ ಶಾಸಕರಿಗೂ ಟಿಕೆಟ್‍ಗೆ ಶಿಫಾರಸು – ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್

 

ಬೆಂಗಳೂರು, ಮಾ.26-ಕಾಂಗ್ರೆಸ್‍ನ ಎಲ್ಲಾ ಹಾಲಿ ಶಾಸಕರಿಗೂ ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಶಿಫಾರಸು ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ನಗರದ ಹೊರವಲಯದ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಚುನಾವಣಾ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಶಾಸಕರ ಪೈಕಿ ಯಾರನ್ನೂ ಕೈ ಬಿಡುವುದಿಲ್ಲ. ಎಲ್ಲರಿಗೂ ಟಿಕೆಟ್ ನೀಡಿ ಎಂದು ಹೈಕಮಾಂಡ್‍ಗೆ ಪಟ್ಟಿ ಕಳುಹಿಸುತ್ತೇವೆ. ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ.

ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾದ ಅಶೋಕ್‍ಖೇಣಿ ಕೂಡ ಶಾಸಕರಾಗಿದ್ದು, ಅವರಿಗೂ ಟಿಕೆಟ್ ನೀಡುವಂತೆ ಶಿಫಾರಸು ಮಾಡಲಾಗುವುದು ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೂ ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಪಟ್ಟಿ ರವಾನಿಸಲಾಗಿದೆ.

ಕಾಂಗ್ರೆಸ್ ಹಲವು ಸುತ್ತಿನ ಸಭೆಗಳನ್ನು ನಡೆಸಿ ಅಳೆದೂ ತೂಗಿ ಪಟ್ಟಿ ಸಿದ್ಧಪಡಿಸುತ್ತಿದ್ದು, ಏಪ್ರಿಲ್ 15ರೊಳಗೆ ಪಟ್ಟಿ ಬಿಡುಗಡೆ ಮಾಡಲಾಗುವುದು.

ರಾಜ್ಯ ಚುನಾವಣಾ ಸಮಿತಿ ಕಳೆದ ವಾರ ಮೊದಲ ಸುತ್ತಿನ ಸಭೆ ನಡೆಸಿತ್ತು. ಅಂದು 2013ರ ಚುನಾವಣೆಯಲ್ಲಿ ಸೋಲು ಕಂಡ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇಂದು ಹಾಲಿ ಕ್ಷೇತ್ರಗಳ ಶಾಸಕರ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲಾ ಶಾಸಕರ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಯಾಗಲಿವೆ. ಕೆಲವು ಕ್ಷೇತ್ರಗಳಿಗೆ ಹೆಚ್ಚುವರಿ ಹೆಸರುಗಳನ್ನು ಶಿಫಾರಸು ಮಾಡಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಾವು ಮಾ.28 ರಂದು ಮತ್ತೊಂದು ಸುತ್ತಿನ ಸಭೆ ನಡೆಸುತ್ತೇವೆ. ಕೇಂದ್ರ ಸ್ಕ್ರೀನಿಂಗ್ ಕಮಿಟಿ ಏ.9 ಅಥವಾ 10 ರಂದು ಸಭೆ ನಡೆಸುವ ನಿರೀಕ್ಷೆ ಇದೆ. ಏಪ್ರಿಲ್ 2 ರಂದು ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್ ಸಭೆ ನಡೆಸುತ್ತಾರೆ. ಎಲ್ಲಾ ಸಭೆಗಳ ನಂತರ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ