ಮಾಸ್ಕೊ, ಮಾ.26-ಪಶ್ಚಿಮ ಸೈಬೀರಿಯಾದ ಜನಸಂದಣಿಯ ಶಾಪಿಂಗ್ ಮಾಲ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮಕ್ಕಳೂ ಸೇರಿದಂತೆ 53 ಮಂದಿ ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಅನೇಕರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂತವಿದೆ. ಕೆಮೆರೊವೊ ನಗರದ ವಿಂಟರ್ ಚೆರ್ರಿ ಶಾಪಿಂಗ್ ಸೆಂಟರ್ನಲ್ಲಿ ಈ ಘೋರ ಅನಾಹುತ ಸಂಭವಿಸಿದೆ. ಭಾನುವಾರ ರಜಾ ದಿನವಾಗಿದ್ದರಿಂದ ನಿನ್ನೆ ಈ ಮಾಲ್ನಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಈ ಸಂದರ್ಭದಲ್ಲಿ ಕಾಣಿಸಿಕೊಂಡ ಬೆಂಕಿ ಮಾಲ್ನ ಒಂದು ಭಾಗವನ್ನು ಆವರಿಸಿ ಮಕ್ಕಳೂ ಸೇರಿದಂತೆ 53 ಜನರನ್ನು ಆಪೆÇೀಶನ ತೆಗೆದುಕೊಂಡಿತು ಎಂದು ರಷ್ಯಾದ ತನಿಖಾ ಸಮಿತಿ ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ದುರಂತದ ನಂತರ 35 ಜನರು ಕಣ್ಮರೆಯಾಗಿದ್ದು, ಕೆಲವರ ಮ್ಥತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿವೆ. ಗಾಯಗೊಂಡ 30ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.
ನಾಪತ್ತೆಯಾದವರಿಗಾಗಿ ಪತ್ತೆ ಕಾರ್ಯ ಮುಂದುವರಿದಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಾಲ್ನಲ್ಲಿದ್ದ ಸಿನಿಮಾ ಹಾಲ್ ಒಂದರಲ್ಲಿ ಕಾಣಿಸಿಕೊಂಡ ಬೆಂಕಿ 1,000 ಚದರ ಮೀಟರ್ಗಳಿಗಿಂತಲೂ ಹೆಚ್ಚು ಪ್ರದೇಶವನ್ನು ನಾಶ ಮಾಡಿದೆ. ಬೆಂಕಿಯ ತೀವ್ರತೆಗೆ ಎರಡು ಚಿತ್ರಮಂದಿರದ ತಾರಸಿಗಳು ಕುಸಿದಿವೆ ಎಂದು ವಾರ್ತಾ ಸಂಸ್ಥೆಗಳು ವರದಿ ಮಾಡಿವೆ. ಶಾಪಿಂಗ್ ಮಾಲ್ನಿಂದ ಬೆಂಕಿ ಮತ್ತು ದಟ್ಟ ಹೊಗೆ ಹೊರಹೊಮ್ಮುತ್ತಿದ್ದ ದೃಶ್ಯಗಳನ್ನು ರಷ್ಯಾ ಟೆಲಿವಿಷನ್ ಬಿತ್ತರಿಸಿದೆ. ದುರಂತದ ತನಿಖೆಗೆ ಆದೇಶಿಸಲಾಗಿದೆ.