ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಹೃದಯಾಘಾತ ಟೋಲ್‍ಕೇಂದ್ರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರನ್ನು ರಕ್ಷಿಣೆ

ಗಂಗಾವತಿ, ಮಾ.25-ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಹೃದಯಾಘಾತವಾದರೂ ಪ್ರಯಾಣಿಕರಿಗೆ ಮಾತ್ರ ಯಾವ ಅಪಾಯವಾಗದಂತೆ ತಡೆಯಲು ಮುಂದಾಗಿ ದ್ವಿಚಕ್ರ ವಾಹನ ಹಾಗೂ ಟೋಲ್‍ಕೇಂದ್ರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರನ್ನು ರಕ್ಷಿಸಿ ಔದಾರ್ಯ ಮೆರೆದಿರುವ ಘಟನೆ ನಡೆದಿದೆ.

ವಾಹನ ಚಲಾಯಿಸುತ್ತಿರುವಾಗಲೇ ಚಾಲಕ ಸತ್ಯನಾರಾಯಣ ಅವರಿಗೆ ಹೃದಯಾಘಾತವಾಗಿದ್ದರಿಂದ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಅವರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ನಂತರ ಮುಂದೆ ಸಾಗಿದ ವಾಹನ ಸಮೀಪದ ಟೋಲ್‍ಗೇಟ್ ಶುಲ್ಕ ವಸೂಲಿ ಕೇಂದ್ರದ ಬಳಿ ಗುದ್ದಿದ್ದರಿಂದ ಸಾರಿಗೆ ವಾಹನ ಸಂಪೂರ್ಣ ಜಖಂಗೊಂಡಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.

ಆದರೆ ಹೃದಯಾಘಾತವಾಗಿದ್ದರಿಂದ ಸತ್ಯನಾರಾಯಣ ಹರಸಾಹಸಪಟ್ಟು ಪ್ರಯಾಣಿಕರಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ವಾಹನವನ್ನು ಒಂದೆಡೆ ನಿಲ್ಲಿಸಲು ಯತ್ನಿಸುವಾಗ ಅಪಘಾತಗಳು ನಡೆದಿರುವುದನ್ನು ಗಮನಿಸಿದ ಸ್ಥಳೀಯರು ಚಾಲಕ ಸತ್ಯನಾರಾಯಣನ ಪರಿಸ್ಥಿತಿ ಅರಿಯದೆ ಮನಸೋ ಇಚ್ಛೆ ವಾಹನ ಚಲಾಯಿಸಿದ್ದಾನೆ ಎಂದು ತಪ್ಪು ಭಾವಿಸಿ ಆತನಿಗೆ ಮನಸ್ಸಿಗೆ ಬಂದಂತೆ ಥಳಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ.
ನಂತರ ಅಸ್ವಸ್ಥರಾಗಿದ್ದ ಚಾಲಕ ಸತ್ಯನಾರಾಯಣನನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತದಿಂದ ದ್ವಿಚಕ್ರ ವಾಹನದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಕಲ್ಗುಡಿ ಗ್ರಾಮದ ಸುರೇಶ್‍ಬಸಪ್ಪ, ನರಸಪ್ಪ ವೆಂಗಳಾಪುರ ಹಾಗೂ ಯಮನೂರಪ್ಪ ಬಲವಂಚಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ