ನವದೆಹಲಿ, ಮಾ.24-ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಎಂದೇ ಪರಿಗಣಿಸಲಾದ ಅಯೋಧ್ಯೆ ಭೂ ವಿವಾದ ಪ್ರಕರಣದ ನ್ಯಾಯ ನಿರ್ಣಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
¾¾ಮಸೀದಿಯು ಇಸ್ಲಾಂ ಧರ್ಮದ ಅಗತ್ಯ ಭಾಗವಲ್ಲ¿¿ ಎಂಬ ಸುಪ್ರೀಂಕೋರ್ಟ್ನ 1994ರ ನಿರ್ಧಾರವನ್ನು ಸಂವಿಧಾನ ಪೀಠದಿಂದ ಮರುಪರಿಶೀಲನೆ ಮಾಡುವ ಬಗ್ಗೆ ಮೊದಲ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸರ್ವೋಚ್ಛ ನ್ಯಾಯಾಲಯ ನಿನ್ನೆ ಹೇಳಿದ್ದು, ಈ ವಿವಾದದ ಇತ್ಯರ್ಥ ವಿಳಂಬವಾಗಲಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್.ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಈ ಕುರಿತು ನಿನ್ನೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. 1994ರ ಇಸ್ಮಾಯಿಲ್ ಫಾರೂಖಿ ಪ್ರಕರಣದಲ್ಲಿ ಮಸೀದಿಯು ಇಸ್ಲಾಂ ಧರ್ಮ ಆಚರಣೆಯ ಒಂದು ಅಗತ್ಯ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಈ ನಿರ್ಧಾರ ಕುರಿತು ಐವರು ನ್ಯಾಯಾಧೀಶರ ಪೀಠದಿಂದ ಮರು ಪರಿಶೀಲನೆ ಮಾಡಬೇಕಾಗಿದೆ ಎಂದು ಕೋರ್ಟ್ ಹೇಳಿದೆ.
ಅಲ್ಲದೇ ಈ ವಿವಾದವನ್ನು ಬೃಹತ್ ಪೀಠಕ್ಕೆ ವರ್ಗಾಯಿಸಬೇಕೆಂಬ ಮನವಿಯನ್ನೂ ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.
ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದಿತ ಸ್ಥಳದ ಸುಮಾರು 3 ಎಕರೆಗಳ ಭೂಮಿಯ ಒಡೆತನಕ್ಕಾಗಿ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಡುವೆ 70 ವರ್ಷಗಳಿಂದಲೂ ಕಾನೂನು ಸಮರ ನಡೆಯುತ್ತಿದೆ.