ಚಿಕ್ಕಮಗಳೂರು, ಮಾ.21- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ಬರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ನಗರದ ಜಿಲ್ಲಾ ಆಟದ ಮೈದಾನದಲ್ಲಿ ಜೆಡಿಎಸ್ನ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಮತದಾರರು ತಮ್ಮ ಜೇಬಿನಲ್ಲಿದ್ದಾರೆಂಬಂತೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಇಂತಹ ನೂರಾರು ಸಿದ್ದರಾಮಯ್ಯ ಬಂದರೂ ದೇವೇಗೌಡರ ಕುಟುಂಬವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.
ರೈತರು ಬೆಳೆ ಬೆಳೆಯುವುದು ದೇಶಕ್ಕಲ್ಲ. ಅವರ ಕುಟುಂಬಕ್ಕೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ರೈತರು ಬೆಳೆ ಬೆಳೆಯದಿದ್ದರೆ ಜೇಟ್ಲಿ ಹೊಟ್ಟೆಗೆ ಮಣ್ಣು ತಿನ್ನುತ್ತಾರಾ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಮರಳು ದಂಧೆ ನಡೆಯುತ್ತಿದ್ದ ಸಂದರ್ಭದಲ್ಲಿ ಇದಕ್ಕೆ ಅವಕಾಶ ಕಲ್ಪಿಸದಂತೆ ಅಂದಿನ ಕಲ್ಲಪ್ಪ ಹಂಡಿಬಾಗ್ ಮಾಡಿದ್ದರು. ಆದರೆ, ಸರ್ಕಾರ ಅವರನ್ನು ಬಲಿ ತೆಗೆದುಕೊಂಡಿತು ಎಂದು ವ್ಯಂಗ್ಯವಾಡಿದರು.
ಹಂಡಿಬಾಗ್ ಅವರು ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಅವರ ಪತ್ನಿ, ಮಗು, ತಂದೆ-ತಾಯಿ ಗುಡಿಸಲಿನಂತಹ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಸಿದ್ದರಾಮಯ್ಯ ಯಾವ ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ರೈತರಿಗೆ ಬೇಕಾಗಿರುವುದು ಬೆಳೆ ನಷ್ಟದ ಪರಿಹಾರ ಕಲ್ಪಿಸಿಕೊಡುವುದು. ಕೇಂದ್ರದ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಮಾಡದೆ ಇಡಿಮುಷ್ಟಿ ಅಕ್ಕಿ ಸಂಗ್ರಹಿಸುವ ಕಾರ್ಯ ಹಮ್ಮಿಕೊಂಡಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ 113 ಸೀಟುಗಳನ್ನು ಗೆಲ್ಲಿಸಿಕೊಟ್ಟಲ್ಲಿ 24 ಗಂಟೆಯೊಳಗೆ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಸೇರಿದಂತೆ ಸಹಕಾರ ಬ್ಯಾಂಕ್ಗಳಲ್ಲಿನ ಸಾಲ ಹಾಗೂ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಿ.ಬಿ.ಲಿಂಗಯ್ಯ, ವೈ.ಎಸ್.ವಿ.ದತ್ತ, ಮಾಜಿ ಶಾಸಕ ಧರ್ಮೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜಿತ್ಕುಮಾರ್, ಜೆಡಿಎಸ್ ಅಭ್ಯರ್ಥಿಗಳಾದ ಹರೀಶ್, ಎಚ್.ಜಿ.ವೆಂಕಟೇಶ್, ಶಿವಶಂಕರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.