ಸಮಾಜ ಒಡೆಯುವಂತಹ ಕೋಮುವಾದಿಗಳನ್ನು ಮಟ್ಟ ಹಾಕುವ ಅಗತ್ಯವಿದೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂದಿ

ಚಿಕ್ಕಮಗಳೂರು, ಮಾ.21- ಸಮುದಾಯಗಳ ನಡುವೆ ದ್ವೇಷದ ಕಿಚ್ಚು ಹಚ್ಚಿ ಸಮಾಜ ಒಡೆಯುವಂತಹ ಕೋಮುವಾದಿಗಳನ್ನು ಮಟ್ಟ ಹಾಕುವ ಅಗತ್ಯತೆ ಇದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಗುಡುಗಿದ್ದಾರೆ.

ಇಂದು ಬೆಳಗ್ಗೆ ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು ನಂತರ ಸಂಸ್ಕøತ ಪಾಠಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಈ ನಡುವೆ ಮಾತನಾಡಿದ ಅವರು, ಭಾರತ ಜಾತ್ಯತೀತ ರಾಷ್ಟ್ರ. ಆದರೆ ಇಂದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪರಸ್ಪರ ದ್ವೇಷ ಭಾವನೆಗಳನ್ನು ಮೂಡಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಕೆಲಸ ಮಾಡುತ್ತಿದೆ. ದುಡಿಯುವ ಕೈಗಳಿಗೆ ಕೆಲಸ ನೀಡದೆ ಕೇವಲ ಬಂಡವಾಳ ಶಾಹಿ ಪರ ನಿಂತು ದೀನ ದಲಿತರನ್ನು ಮರೆತು ಕೇವಲ ಸುಳ್ಳು ಪ್ರಚಾರದಲ್ಲೇ ನಾಲ್ಕು ವರ್ಷ ಕಳೆದಿದೆ ಎಂದು ಕಿಡಿಕಾರಿದರು.

ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ತಮ್ಮ ತಂದೆ ರಾಜೀವ್‍ಗಾಂಧಿ ಹಾಗೂ ಅಜ್ಜಿ ಇಂದಿರಾಗಾಂಧಿ ಅವರು ಶಾರದಾ ಮಠದ ಭಕ್ತರಾಗಿದ್ದು, ಅವರು ಆಗಮಿಸಿದ್ದ ಈ ಪುಣ್ಯಕ್ಷೇತ್ರಕ್ಕೆ ನಾನು ಬಂದಿದ್ದು ಸಂತಸ ತಂದಿದೆ ಎಂದರು.

ಅಜ್ಜಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್‍ಜನ್ಮ ನೀಡಿದ ಜಿಲ್ಲೆ ಚಿಕ್ಕಮಗಳೂರು ಆಗಿದೆ. ಶಂಕರಾಚಾರ್ಯರು ಸ್ಥಾಪಿಸಿದ ಪುಣ್ಯಕ್ಷೇತ್ರ ಶೃಂಗೇರಿಗೆ ತಾವು ಆಗಮಿಸಿ ತಾಯಿ ಶಾರದಾಂಬೆಯ ದರ್ಶನ ಪಡೆದಿರುವುದು ನೆಮ್ಮದಿ ತಂದಿದೆ ಎಂದರು.

ನಕ್ಸಲ್ ಪ್ರದೇಶವಾದ ಕಾರಣ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ