ಬೆಂಗಳೂರು, ಮಾ.19- ಏಳು ಬಂಡಾಯ ಶಾಸಕರು ಸೇರಿದಂತೆ ಎಲ್ಲಾ 37 ಶಾಸಕರಿಗೆ ಜೆಡಿಎಸ್ ರಾಜ್ಯಸಭೆ ಚುನಾವಣೆ ವಿಪ್ ನೀಡಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಸಭೆ ಚುನಾವಣೆಯ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಎಂ.ಫಾರೂಕ್ ಪರ ತಮ್ಮ ಮೊದಲ ಪ್ರಾಶಸ್ತ್ಯ ಮತ ನೀಡಬೇಕೆಂದು 7 ಬಂಡಾಯ ಶಾಸಕರೂ ಸೇರಿದಂತೆ ಎಲ್ಲಾ ಜೆಡಿಎಸ್ ಶಾಸಕರಿಗೆ ವಿಪ್ ನೀಡಿದ್ದಾರೆ.
ಇದೇ 23ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಜೆಡಿಎಸ್ ಪಕ್ಷ ಫಾರೂಕ್ ಅವರನ್ನು ಕಣಕ್ಕಿಳಿಸಿದೆ. ಪಕ್ಷೇತರ ಶಾಸಕರು ಹಾಗೂ ಇನ್ನಿತರೆ ಶಾಸಕರ ಬೆಂಬಲದೊಂದಿಗೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಕಣಕ್ಕಿಳಿಸಿದೆ.
ರಾಜ್ಯಸಭೆಯ ನಾಲ್ಕೂ ಸ್ಥಾನಗಳಿಗೆ ನಡೆಯುವ ಈ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಗೆಲ್ಲಬಹುದಾಗಿದ್ದು, ರಾಜೀವ್ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್ ಪಕ್ಷ ಎರಡು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ತಮ್ಮ ಪಕ್ಷದ ಹೆಚ್ಚುವರಿ ಮತಗಳು ಜೆಡಿಎಸ್ನ ಬಂಡಾಯ ಶಾಸಕರು, ಪಕ್ಷೇತರರ ಮತಗಳ ಬೆಂಬಲದೊಂದಿಗೆ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ.