ಬೆಂಗಳೂರು,ಮಾ.17-ಕಾಂಗ್ರೆಸ್ನ ಘಟಾನುಘಟಿ ನಾಯಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳ ಮೇಲೆ ವಿಶೇಷ ನಿಗಾ ಇಟ್ಟಿರುವ ಬಿಜೆಪಿ ಇದಕ್ಕಾಗಿ ಸದ್ದಿಲ್ಲದೆ ರಣತಂತ್ರ ರೂಪಿಸುವಲ್ಲಿ ಮಗ್ನವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು ಜಿಲ್ಲೆ (ವರುಣಾ), ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರನಿಧಿಸುವ ಕೊರಟಗೆರೆ, ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪನವರು ಪ್ರತಿನಿಧಿಸುವ ಟಿ.ನರಸೀಪುರ, ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಬಿಟಿಎಂಲೇಔಟ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಸರ್ವಜ್ಞನಗರ, ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ವಿನಯ್ಕುಲರ್ಣಿಯವರ ಧಾರವಾಡ ದಕ್ಷಿಣ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಪ್ರತಿನಿಧಿಸುವ ಸೇಡಂ, ಉನ್ನತ ಶಿಕ್ಷಣ ಸಚಿವ ಬಸವರಾಜರೆಡ್ಡಿ ಪ್ರತಿನಿಧಿಸುವ ಯಲ್ಬುರ್ಗ, ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರ ಬಬಲೇಶ್ವರ ಸೇರಿದಂತೆ ಒಟ್ಟು 15ರಿಂದ 20 ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ.
ಈ ಕ್ಷೇತ್ರಗಳಲ್ಲಿ ಪಕ್ಷದ ವತಿಯಿಂದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಪ್ರಬಲ ಹೋರಾಟದ ಜೊತೆಗೆ ಕಾಂಗ್ರೆಸ್ನ ಪ್ರಮುಖ ನಾಯಕರನ್ನು ಕಟ್ಟಿ ಹಾಕಬಹುದೆಂಬುದು ಬಿಜೆಪಿಯ ಚಿಂತಕರ ಚಾವಡಿಯ ಲೆಕ್ಕಾಚಾರವಾಗಿದೆ.
ಆಯಾ ಕ್ಷೇತ್ರಗಳಲ್ಲಿ ಪ್ರಬಲವಾಗಿರುವ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಮೂಲಕ ಎದುರಾಳಿ ಪಕ್ಷದ ಅಭ್ಯರ್ಥಿಯ ಆತ್ಮಸ್ಥೈರ್ಯ ಕುಂದಿಸುವುದರ ಜೊತೆಗೆ ಬೇರೆ ಕಡೆ ಪ್ರಚಾರ ನಡೆಸದಂತೆ ತಡೆ ಹಿಡಿಯುವುದು ಇದರ ಉದ್ದೇಶವಾಗಿದೆ.
ಈ ಹಿಂದೆ ಉತ್ತರಪ್ರದೇಶ, ಉತ್ತರಾಖಂಡ್, ಗುಜರಾತ್, ಇತ್ತೀಚೆಗೆ ನಡೆದ ತ್ರಿಪುರ, ಮೇಘಾಲಯ, ನ್ಯಾಗಲಾಂಡ್ನಲ್ಲಿ ಇದೇ ತಂತ್ರಗಳನ್ನು ಅನುಸರಿಸಲಾಗಿತ್ತು.
ಪ್ರಬಲವಾಗಿರುವ ಕಡೆ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದರೆ ಪ್ರಮುಖ ನಾಯಕರು ಕ್ಷೇತ್ರ ಬಿಟ್ಟು ಆಚೀಚೆ ಹೋಗದಂತೆ ತಡೆಯಬಹುದು. ಇದರಿಂದ ಪಕ್ಷಕ್ಕೆ ಆನೆಬಲ ಬರುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಮತ್ತಿತರ ನಾಯಕರು ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರಚಾರ ನಡೆಸುವುದು ಅನಿವಾರ್ಯ.
ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ತಮ್ಮ ಕುಟುಂಬದಲ್ಲಿರುವ ಪುತ್ರರು, ಪುತ್ರಿಯರು ಇಲ್ಲವೇ ಸಂಬಂಧಿಕರು ಸೇರಿದಂತೆ ನಂಬಿಕಸ್ಥರನ್ನೇ ಕ್ಷೇತ್ರದ ಉಸ್ತುವಾರಿಗಳನ್ನಾಗಿ ನೇಮಕ ಮಾಡುತ್ತಿದ್ದರು. ತಾವು ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡಿದರೆ ಸಾಲದು ಬದಲಿಗೆ ರಾಜ್ಯಾದ್ಯಂತ ಪ್ರಚಾರ ಮಾಡಿದರೆ ಪಕ್ಷ ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆ ಎಂಬುದು ಇವರ ಉದ್ದೇಶ.
2013ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿದ್ದರು. ಸಿದ್ದರಾಮಯ್ಯ ಹೇಗೋ ವರುಣ ಕ್ಷೇತ್ರದಲ್ಲಿ ಭಾರೀ ಬಹುಮತಗಳ ಅಂತರದಿಂದ ಗೆದ್ದರೆ, ಕೊರಟಗೆರೆಯಲ್ಲಿ ಪರಮೇಶ್ವರ್ ಬಹುಮತಗಳ ಅಂತರದಿಂದ ಪರಾಭವಗೊಂಡಿದ್ದರು. ಪರಿಣಾಮ ಮುಖ್ಯಮಂತ್ರಿ ಹುದ್ದೆ ಅವರಿಗೆ ಕೈತಪ್ಪಿತ್ತು.
ಈಗ ಇದೇ ತಂತ್ರವನ್ನು ಹೆಣೆದಿರುವ ಬಿಜೆಪಿ ನಾಯಕರು ಕಾಂಗ್ರೆಸ್ನ ಪ್ರಬಲ ನಾಯಕರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ.
ರಾಜ್ಯಕ್ಕೆ ಆಗಮಿಸಿದ ಚಾಣುಕ್ಯ ತಂಡ:
ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೊತೆ ಗುರುತಿಸಿಕೊಂಡಿರುವ ಚಿಂತಕರ ಚಾವಡಿಯ ಒಂದು ತಂಡ ರಾಜ್ಯಕ್ಕೆ ಆಗಮಿಸಿ ಸದ್ದಿಲ್ಲದೆ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಎದುರಾಳಿ ಅಭ್ಯರ್ಥಿಯ ಪ್ಲಸ್ ಮತ್ತು ಮೈನಸ್ ತಿಳಿದುಕೊಂಡು ಜಾತಿ ಸಮೀಕರಣ, ಪಕ್ಷದ ಸಂಘಟನೆ ಮೂಲಕವೇ ಅಭ್ಯರ್ಥಿ ಗೆಲುವಿಗೆ ರಣತಂತ್ರವನ್ನು ಈ ತಂಡ ರೂಪಿಸಲಿದೆ.
ಉತ್ತರ ಪ್ರದೇಶದಲ್ಲಿ ಈ ಪ್ರಯೋಗ ಯಶಸ್ವಿಯಾಗಿತ್ತು. ಅದೇ ಮಾದರಿಯನ್ನು ಕರ್ನಾಟಕದಲ್ಲಿ ಬಿಜೆಪಿ ಹಮ್ಮಿಕೊಂಡಿದೆ.