ಕಾಂಗ್ರೆಸ್ ನಾಯಕರಿಲ್ಲದೆ ದಿವಾಳಿ ಸ್ಥಿತಿ ತಲುಪಿದೆ: ಕೇಂದ್ರ ಸಚಿವ ಅನಂತಕುಮಾರ್ ವಾಗ್ದಾಳಿ

ಬೆಂಗಳೂರು,ಮಾ.17-ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಾಯಕರಿಲ್ಲದೆ ದಿವಾಳಿ ಸ್ಥಿತಿ ತಲುಪಿದ್ದು , ಸದ್ಯಕ್ಕೆ ಅಲ್ಲಿರುವವರು ಗುತ್ತಿಗೆದಾರರು ಮತ್ತು ಡೀಲರ್ಸ್‍ಗಳು ಎಂದು ಕೇಂದ್ರ ಸಚಿವ ಅನಂತಕುಮಾರ್ ವಾಗ್ದಾಳಿ ನಡೆಸಿದರು.

ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಸಂಸದ ವೀರಪ್ಪ ಮೊಯ್ಲಿ , ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಕುರಿತು ಮಾಡಿದ ಟ್ವಿಟ್‍ನ್ನು ಉಲ್ಲೇಖಿಸಿದರು.

ಎಐಸಿಸಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರ ಮಾತನ್ನು ಸದ್ಯಕ್ಕೆ ಯಾರೊಬ್ಬರು ಕೇಳುವ ಸ್ಥಿತಿಯಲ್ಲಿಲ್ಲ. ಸಾಲು ಸಾಲು ಚುನಾವಣೆಯನ್ನು ಸೋತಿರುವ ಕಾಂಗ್ರೆಸ್ ಪಕ್ಷ ಹೇಳುವವರು ಕೇಳುವವರು ಇಲ್ಲದೆ ದಿಕ್ಕು ತಪ್ಪಿದ ಹಡಗಿನಂತಾಗಿದೆ ಎಂದು ಟೀಕಿಸಿದರು.

ವೀರಪ್ಪ ಮೊಯ್ಲಿ ಅವರು ಹೇಳಿರುವಂತೆ ಕಾಂಗ್ರೆಸ್‍ನಲ್ಲಿ ಗುತ್ತಿಗೆದಾರರು ಮತ್ತು ಡೀಲರ್ಸ್‍ಗಳೇ ಎಲ್ಲವನ್ನು ನಿರ್ಧರಿಸುತ್ತಿದ್ದಾರೆ. ಪಕ್ಷದ ಮಾನ ಹರಾಜಾಗಿದೆ ಎಂಬ ಕಾರಣಕ್ಕೆ ನನ್ನ ಟ್ವಿಟರ್‍ನ್ನು ಹ್ಯಾಕ್ ಮಾಡಲಾಗಿದೆ ಎಂಬ ಸಬೂಬು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಬಿಜೆಪಿಗೆ ಇಂದು ಸದೃಢವಾದ ನಾಯಕತ್ವವಿದೆ. ಪಕ್ಷದ ಶಿಸ್ತು ಮೀರದಂತೆ ತಿಳಿಹೇಳಲು ನಾಯಕರಿದ್ದಾರೆ. ಒಡೆದ ಮನೆಯಂತಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಯಾರು ದಿಕ್ಕು ಎಂದು ಅನಂತಕುಮಾರ್ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾನು ಕೌರವ ವಂಶಸ್ಥರೆಂದು ಟೀಕೆ ಮಾಡಿದ್ದೆ. ನನಗೆ ಶ್ರೀಲಂಕಾದಿಂದ ಮೊಬೈಲ್‍ಗೊಂದು ಎಸ್‍ಎಂಎಸ್ ಬಂತು. ಸಿದ್ದರಾಮಯ್ಯ ಕೌರವ ವಂಶಸ್ಥರಲ್ಲ. ಅವರು ಕುಂಭಕರ್ಣನ ಕುಲಕ್ಕೆ ಸೇರಿದವರೆಂದು ಟೀಕಿಸಿದರು.

ಬಿಟಿಎಂ ಲೇಔಟ್‍ನಲ್ಲಿ ಕೆಲವರು ನಿದ್ದೆಯನ್ನೆ ಮಾಡುವುದಿಲ್ಲ.ಯಾವ ಪಕ್ಷದಲ್ಲಿ ಏನು ನಡೆಯುತ್ತದೆ, ದಿನ ಕಳೆದರೆ ಏನು ಟೀಕೆ ಮಾಡಬೇಕು ಎಂಬುದರಲ್ಲೇ ನಿರತರಾಗಿದ್ದಾರೆ ಎಂದು ಪರೋಕ್ಷವಾಗಿ ರಾಮಲಿಂಗಾರೆಡ್ಡಿ ವಿರುದ್ಧ ಹರಿಹಾಯ್ದರು.

ಜೆಡಿಎಸ್ ವಿರುದ್ದವೂ ಕಿಡಿಕಾರಿದ ಅವರು, ಅಪ್ಪವೊಂದು ಕಡೆ, ಹಿರಿಯ ಮಗ ಮತ್ತೊಂದು ಕಡೆ, ಚಿಕ್ಕಮಗ ಮಗದೊಂದು ಕಡೆಯಾದರೆ ಸೊಸೆ ಇನ್ನೊಂದು ಕಡೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಪಕ್ಷದಲ್ಲಿ ಯಾರು, ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದೇ ಗೊತ್ತಿಲ್ಲ. ಆದರೂ ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಕುಹಕವಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ