ಬಿಜೆಪಿಯೊಳಗೆ ಆಕಾಂಕ್ಷಿಗಳ ನಡುವಿನ ಅಸಮಾಧಾನ ಆಸ್ಪೋಟ

ಬೆಂಗಳೂರು,ಮಾ.17-ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬೆನ್ನಲ್ಲೇ ಬಿಜೆಪಿಯೊಳಗೆ ಆಕಾಂಕ್ಷಿಗಳ ನಡುವಿನ ಅಸಮಾಧಾನ ಮತ್ತೆ ಆಸ್ಪೋಟಗೊಂಡಿದೆ.
ಬೆಂಗಳೂರು ಮಹಾನಗರದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಮುಂದಿಟ್ಟುಕೊಂಡು ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲೂ ಆಕಾಂಕ್ಷಿಗಳ ಮುನಿಸು ಇಂದು ಸ್ಫೋಟ ಗೊಂಡಿದೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್‍ನಲ್ಲಿ ನಡೆದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಬಿಜೆಪಿ ಆಕಾಂಕ್ಷಿಗಳಾದ ಪಕ್ಷದ ಸಹ ವಕ್ತಾರ ವಿವೇಕ್ ರೆಡ್ಡಿ , ಜಯದೇವ, ಲಲ್ಲೇಶ್ ರೆಡ್ಡಿ ಅವರ ಬೆಂಬಲಿಗರು ಪ್ರತ್ಯೇಕವಾಗಿ ಮೂರು ಗುಂಪುಗಳಾಗಿ ಪಾದಯಾತ್ರೆ ಹೊರಡುವ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತು ಮಾಡಿದರು.

ಕೇಂದ್ರ ಸಚಿವ ಅನಂತಕುಮಾರ್ ನೇತೃತ್ವದಲ್ಲಿ ಇಂದು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಧಾನಪರಿಷತ್ ಸದಸ್ಯೆ ತಾರಾ ಹಾಗೂ ಶಾಸಕರು, ಬಿಬಿಎಂಪಿ ಸದಸ್ಯರು, ಪಕ್ಷದ ಕಾರ್ಯಕರ್ತರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಪಾದಯಾತ್ರೆ ಆರಂಭವಾಗಿತ್ತು.

ಪ್ರಾರಂಭದಲ್ಲೇ ವಿವೇಕ್ ರೆಡ್ಡಿ, ಜಯದೇವ ಹಾಗೂ ಲಲ್ಲೇಶ್ ರೆಡ್ಡಿ ಬೆಂಬಲಿಗರು ತಮ್ಮ ತಮ್ಮ ಕಾರ್ಯಕರ್ತರನ್ನು ಒಗ್ಗೂಡಿಸಿ ಶಕ್ತಿ ಪ್ರದರ್ಶಿಸಲು ಮುಂದಾದರು. ಪಾದಯಾತ್ರೆ ಬದಲಿಗೆ ಇದು ಶಕ್ತಿ ಪ್ರದರ್ಶನದ ಕಾರ್ಯಕ್ರಮವಾಗಿ ಪರಿವರ್ತನೆಯಾಯಿತು.

ಒಂದು ಹಂತದಲ್ಲಿ ಮೂವರ ಬೆಂಬಲಿಗರು ಪರಸ್ಪರ ತಳ್ಳಾಟ, ನೂಕಾಟ, ಕಿರುಚಾಟ ಮಾಡಿ ಸಚಿವ ಅನಂತಕುಮಾರ್ ಅವರನ್ನು ತಳ್ಳಿದರು. ಇದರಿಂದ ಮುಜುಗರಕ್ಕೀಡಾದ ಅನಂತಕುಮಾರ್ ಕಾರ್ಯಕರ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಇದನ್ನು ಪುನರಾವರ್ತಿಸಿದರೆ ತಾವು ಪಾದಯಾತ್ರೆಯಿಂದ ಹೊರಹೋಗುವುದಾಗಿ ಹೇಳಿದರು.
ಇಷ್ಟಕ್ಕೂ ಸುಮ್ಮನಾಗದ ಜಯದೇವ ಹಾಗೂ ಲಲ್ಲೇಶ್ ರೆಡ್ಡಿ ಬೆಂಬಲಿಗರು ವಿವೇಕ್ ರೆಡ್ಡಿ ಮತ್ತು ಅವರ ಬೆಂಬಲಿಗರನ್ನು ಹಿಂದಕ್ಕೆ ಹಾಕಿ ಮುಂದೆ ಬರುವ ಪ್ರಯತ್ನ ಮಾಡಿದರು. ಕೊನೆಗೆ ಅನಂತಕುಮಾರ್ ಮಧ್ಯಪ್ರವೇಶಿಸಿ ಎಲ್ಲರನ್ನು ಸಮಾಧಾನಪಡಿಸಿದ ಬಳಿಕ ಯಾತ್ರೆ ಮುಂದುವರೆಯಿತು.

ಗೂಂಡಾಗಳಿಂದ ಬೆಂಗಳೂರು ರಕ್ಷಿಸಿ:
ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ಅನಂತಕುಮಾರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಬೆಂಗಳೂರು ಇಂದು ಕಾಂಗ್ರೆಸ್ ಅವಧಿಯಲ್ಲಿ ಗೂಂಡಾನಗರಿ ಪರಿವರ್ತನೆಯಾಗಿದೆ. ಯಾವುದೇ ಕಾರಣಕ್ಕೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬಾರದೆಂದು ಮನವಿ ಮಾಡಿದರು.
ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ನಗರ ಸಂಪೂರ್ಣವಾಗಿ ಹಾಳಾಗಿದೆ. ಹಾಡುಹಗಲೇ ಮಹಿಳೆಯರ ಮೇಲೆ ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ರೌಡಿಗಳ ಹಾವಳಿ ಹೆಚ್ಚಾಗಿದೆ. ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ನಗರದ ಕಡೆ ಗಮನಹರಿಸದಿರುವುದೇ ಈ ಸ್ಥಿತಿಗೆ ಕಾರಣ ಎಂದು ದೂರಿದರು.
ಅಶೋಕ್ ಗೈರು:
ಇನ್ನು ಪಕ್ಷದ ಮುಖಂಡ ಆರ್.ಅಶೋಕ್ ಕಾಲುನೋವಿನ ಕಾರಣದಿಂದ ಇಂದಿನ ಪಾದಯಾತ್ರೆಗೆ ಹಾಜರಾಗಿರಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ