ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತು ವೀರಪ್ಪ ಮೊಯ್ಲಿ ಟ್ವೀಟ್ ವಿಚಾರ: ವಿಪಕ್ಷಗಳಿಗೆ ಅಸ್ತ್ರವಾದ ಕಾಂಗ್ರೆಸ್ ನಾಯಕರು; ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ

ಬೆಂಗಳೂರು: ಮಾ-೧೬: ಮಾಜಿ ಮುಖ್ಯಮಂತ್ರಿ, ಸಂಸದ ವೀರಪ್ಪ ಮೊಯ್ಲಿ ಮತ್ತು ಅವರ ಪುತ್ರ ಹರ್ಷ ಮೊಯ್ಲಿ ಅವರ ಪುನರಾವರ್ತಿತ ಒಂದೇ ಟ್ವೀಟ್‌ಗಳು ಕಾಂಗ್ರೆಸ್‌ ಪಕ್ಷದಲ್ಲಿ ಸಂಚಲನ ಮೂಡಿಸಿವೆ.

‘ಕಾಂಗ್ರೆಸ್‌ ಹಣದ ರಾಜಕೀಯಕ್ಕೆ ಅಂತ್ಯ ಹಾಡಬೇಕಿದೆ. ರಸ್ತೆ ಗುತ್ತಿಗೆ ದಾರರು ಮತ್ತು ಅವರೊಂದಿಗೆ ಅಪವಿತ್ರ ಸಂಬಂಧ ಹೊಂದಿರುವ ರಾಜ್ಯದ ಪಿಡಬ್ಲ್ಯೂಡಿ ಮಂತ್ರಿ ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಾಧ್ಯವಿಲ್ಲ’ ಎಂದು ಟ್ವೀಟ್‌ನಲ್ಲಿ ಬರೆದು ಐಎನ್‌ಸಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಟ್ವೀಟರ್‌ಗೆ ಟ್ಯಾಗ್‌ ಮಾಡಿದ್ದಾರೆ.

ಇದೇ ಟ್ವೀಟ್ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಅವರ ಟ್ವಿಟರ್ ಖಾತೆಯಲ್ಲೂ ಪ್ರಕಟಗೊಂಡಿತ್ತು. ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇಬ್ಬರ ಖಾತೆಯಿಂದಲೂ ಟ್ವೀಟ್‌ ಅನ್ನು ಅಳಿಸಿಹಾಕಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮೊಯಿಲಿ, ಟ್ವೀಟ್‌ಗೂ ತಮಗೂ ಸಂಬಂಧವಿಲ್ಲ. ಟ್ವಿಟರ್‌ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಮೊಯಿಲಿ ಮಾಡಿದ್ದಾರೆ ಎನ್ನಲಾದ ಟ್ವೀಟ್‌ನ ವಿಷಯ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವ್ಯಾಪಕ ವಾಗ್ದಾಳಿ ನಡೆಸುತ್ತಿದ್ದಾರೆ. ‘ಕಾಂಗ್ರೆಸ್ ಟಿಕೆಟ್ ನೀಡುವ ವಿಷಯದಲ್ಲಿ ರಾಜ್ಯ ಲೋಕೋಪಯೋಗಿ ಸಚಿವ ಮತ್ತು ರಸ್ತೆ ಗುತ್ತಿಗೆದಾರರ ನಡುವಿನ ನಂಟಿನ ಬಗ್ಗೆ ಬಹಿರಂಗಪಡಿಸಿರುವ ಮಾನ್ಯ ಶ್ರೀ ಮೊಯ್ಲಿಯವರು, ಕಾಮಗಾರಿ ಮಾಡದೆ 1500 ರೂ ಕೋಟಿ ಬಿಲ್ ಪಡೆದಿರುವ ಕಾಂಗ್ರೆಸ್ ಶಾಸಕ ಶ್ರೀ ಮುನಿರತ್ನ ಬಗ್ಗೆ ಏನಂತಾರೆ? ಈ ದುಡ್ಡು ಕೂಡಾ ಕಾಂಗ್ರೆಸ್ ಟಿಕೆಟ್‌ಗಾ? ಅಥವಾ ಚುನಾವಣಾ ಖರ್ಚಿಗಾ?’ ಎಂದು ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

Veerappa Moily,tweet, raised

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ