(ಟಿಬಿ) ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ, ಮಾ.13-ಭಾರತದಿಂದ 2025ರ ವೇಳೆ ಕ್ಷಯ (ಟಿಬಿ) ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಜಾಗತಿಕವಾಗಿ ನಿಗದಿಗೊಳಿಸಿದ ಅಂತಿಮ ಗಡುವಿಗಿಂತ 5 ವರ್ಷ ಮುನ್ನವೇ ಮೋದಿ ಕಾಲಮಿತಿ ಗೊತ್ತುಪಡಿಸಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಇಂದು ಟಿಬಿ ನಿರ್ಮೂಲನೆ ಶೃಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಆ ಮೂಲಕ 2025ರ ಹೊತ್ತಿಗೆ ಅಭಿಯಾನದ ಮಾದರಿಯಲ್ಲಿ ಟಿಬಿ ನಿರ್ಮೂಲನೆಗೆ ರಾಷ್ಟ್ರೀಯ ಪ್ರಮುಖ ಯೋಜನೆ ಅಡಿ ಚಟುವಟಿಕೆಗಳನ್ನು ಕೈಗೊಳ್ಳುವ ಕಾರ್ಯಕ್ರಮವನ್ನು ಅನಾವರಣಗೊಳಿಸಲಾಗಿದೆ.

ಜಾಗತಿಕವಾಗಿ 2030ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ನಾವು ಅದಕ್ಕಿಂತ ಐದು ವರ್ಷಗಳ ಮುನ್ನವೇ ಅಂದರೆ 2025ರ ವೇಳೆಗೆ ಈ ಗುರಿ ಸಾಧಿಸಲು ಸಂಕಲ್ಪ ಮಾಡಿದ್ದೇವೆ ಎಂದು ಮೋದಿ ಹೇಳಿದರು.

ಕ್ಷಯ ರೋಗದ ಪಿಡುಗನ್ನು ನಿರ್ಮೂಲನೆ ಮಾಡಲು ನಡೆಯುತ್ತಿರುವ ಯತ್ನಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಿ ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ಪೂರಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ದೇಶದಿಂದ ಕ್ಷಯರೋಗವನ್ನು ಮುಲೋತ್ಪಾಟನೆ ಮಾಡಲು ರಾಜ್ಯ ಸರ್ಕಾರಗಳು ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಹೇಳಿದರು. ಈ ಅಭಿಯಾನದಲ್ಲಿ ಕೈಜೋಡಿಸುವಂತೆ ನಾನು ಈಗಾಗಲೇ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಮೋದಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ