ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಸಲ್ಲಿಕೆಯಾಗಿದ್ದ 5 ಅಭ್ಯರ್ಥಿಗಳ ನಾಮಪತ್ರವು ಕ್ರಮಬದ್ಧವಾ. ಎಸ್.ಮೂರ್ತಿ

ಬೆಂಗಳೂರು, ಮಾ.13-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಸಲ್ಲಿಕೆಯಾಗಿದ್ದ 5 ಅಭ್ಯರ್ಥಿಗಳ ನಾಮಪತ್ರವು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದರು.
ನಾಮಪತ್ರಗಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಐದು ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳು ಅಂಗೀಕಾರವಾಗಿವೆ.
ನಾಮಪತ್ರ ವಾಪಸ್ ಪಡೆಯಲು ಮಾ.15ರವರೆಗೆ ಕಾಲಾವಕಾಶವಿದೆ. ಈ ಐದು ಮಂದಿ ಅಭ್ಯರ್ಥಿಗಳು ಹಾಗೂ ವೀಕ್ಷಕರಾಗಿ ಆಗಮಿಸಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್, ಸಹಾಯಕ ಚುನಾವಣಾಧಿಕಾರಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಸಲಾಯಿತು.
ಚುನಾವಣಾ ಆಯೋಗದ ಎಲ್ಲ ನಿಯಮಗಳಂತೆ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು ಅಂಗೀಕಾರಗೊಂಡಿದೆ. ಬಿಜೆಪಿ ಅಭ್ಯರ್ಥಿ ರಾಜೀವ್‍ಚಂದ್ರಶೇಖರ್, ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್, ಕಾಂಗ್ರೆಸ್ ಅಭ್ಯರ್ಥಿಗಳಾದ ಎಲ್.ಹನುಮಂತಯ್ಯ, ಸಯ್ಯದ್ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ್ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರವನ್ನು ಯಾರೇ ಒಬ್ಬ ಅಭ್ಯರ್ಥಿ ನಿಗದಿತ ಗಡುವಿನೊಳಗೆ ವಾಪಸ್ ಪಡೆಯದಿದ್ದರೆ ಮಾ.23ರಂದು ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆ ನಡೆಸಿ ಫಲಿತಾಂಶ ನೀಡಲಾಗುತ್ತದೆ.
ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್, ಕೆ.ರೆಹಮಾನ್‍ಖಾನ್, ರಂಗಸಾಯಿ ರಾಮಕೃಷ್ಣ ಹಾಗೂ ಬಸವರಾಜ್ ಪಾಟೀಲ್ ಅವರು ಏ.2ರಂದು ನಿವೃತ್ತಿಯಾಗುತ್ತಿದ್ದಾರೆ. ಇವರ ನಿವೃತ್ತಿಯಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ