ಬೆಂಗಳೂರು, ಮಾ. 10-ನಿವೃತ್ತ ನ್ಯಾಯಾಧೀಶ ನಾಗಮೋಹನ್ದಾಸ್ ವರದಿಯ ಪ್ರಕಾರ ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತರ ಧರ್ಮವೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲಿಂಗಾಯಿತ ಧರ್ಮ ಮಹಾಸಭಾದ ಗೌರವಾಧ್ಯಕ್ಷೆ ಶ್ರೀ ಮಾತೆ ಮಹಾದೇವಿ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾಗಮೋಹನ್ದಾಸ್ ನೇತೃತ್ವದ ಸಮಿತಿಯು ಲಿಂಗಾಯಿತವಾದದವರು ಮಾತ್ರವಲ್ಲದೆ ವೀರಶೈವ ವಾದದವರು ಮಂಡಿಸಿದ ವಾದವನ್ನು ಆಲಿಸಿದೆ. ಇಬ್ಬರ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಈ ವರದಿಯನ್ನು ಒಪ್ಪಿಸಿದೆ ಎಂದು ಹೇಳಿದರು.
ಈ ವರದಿಯು ಲಿಂಗಾಯಿತವು ಧಾರ್ಮಿಕ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸ್ವತಂತ್ರ ಧರ್ಮವೆಂದು ನಿರ್ಣಯಿಸಿದೆ. 900 ವರ್ಷಗಳ ನಂತರ ಈ ಐತಿಹಾಸಿಕ ಸತ್ಯವು ಘೋಷಣೆಯಾಗಿದೆ. ಆದ್ದರಿಂದ ಮುಖ್ಯಮಂತ್ರಿಯವರು ಈ ವರದಿಯ ಸತ್ಯತೆಯನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಕೋರಿದರು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಲಿಂಗಾಯಿತ ಧರ್ಮವನ್ನು ಸ್ಥಾಪಿಸಿದಾಗ ಕಾಳಮುಕರು, ಪಾಶುತತರು ಮತ್ತು ಎಲ್ಲ ವೃತ್ತಿಯವರು, ಜಾತಿಯವರು ಅದರಂತೆ ವೈರಶೈವರು ಬಂದು ಸೇರಿದರು. ಹಾಗಾಗಿ ಶತಮಾನಗಳಿಂದ ವೀರಶೈವವು ಲಿಂಗಾಯತ ಸಮಾಜದಲ್ಲಿ ಒಂದು ಉಪಪಂಗಡವಾಗಿ ಉಳಿದಿದೆ. ಇದನ್ನು ಬ್ರಿಟಿಷ್ ಕಾಲದ ಗೆಜೆಟಿಯರ್ನಿಂದ ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು.
ಲಿಂಗಾಯಿತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತವೆಂದು ನಿರ್ಣಯಿಸಲು ಮುಖ್ಯಮಂತ್ರಿಗಳು ಹಿಂಜರಿಯಬಾರದು ಎಂದು ಮಾತೆ ಮಹಾದೇವಿ ಮನವಿ ಮಾಡಿದರು.