ಟಿಕೆಟ್ ಹಂಚಿಕೆ ಸಂಬಂಧ ಬಿಜೆಪಿ ವೀಕ್ಷಕರ ತಂಡದಿಂದ ರಾಜ್ಯದಲ್ಲಿ ಪ್ರವಾಸ

 

ಬೆಂಗಳೂರು,ಮಾ.10-ರಾಜ್ಯದಲ್ಲಿ ಶತಾಯಗತಾಯ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಪಣ ತೊಟ್ಟಿರುವ ಬಿಜೆಪಿ ಟಿಕೆಟ್ ಹಂಚಿಕೆ ಸಂಬಂಧ ಇಂದಿನಿಂದ ರಾಜ್ಯದ ವಿವಿಧ ಕಡೆ ವೀಕ್ಷಕರ ತಂಡ ರಾಜ್ಯದಲ್ಲಿ ಪ್ರವಾಸ ಆರಂಭಿಸಿದೆ.
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ಈ ತಂಡ 55 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಟಿಕೆಟ್ ಹಂಚುವ ಕುರಿತು ಅಭ್ಯರ್ಥಿಗಳ ಬಗ್ಗೆ ಸದ್ದಿಲ್ಲದೆ ಮಾಹಿತಿಯನ್ನು ಸಂಗ್ರಹಿಸಲಿದೆ.
ಈ ಹಿಂದೆ ಉತ್ತರಪ್ರದೇಶ, ಉತ್ತರಖಂಡ್, ಇತ್ತೀಚೆಗೆ ಚುನಾವಣೆ ನಡೆದ ತ್ರಿಪುರದಲ್ಲೂ ಇದೇ ಮಾದರಿಯನ್ನು ಅನುಸರಿಸಿದ್ದ ಬಿಜೆಪಿ ಇದನ್ನೇ ಇತರೆಡೆಯಲ್ಲೂ ಅನುಷ್ಠಾನಗೊಳಿಸಲು ಮುಂದಾಗಿದೆ.
ಅಮಿತ್ ಷಾ ಅವರಿಗೆ ಅತ್ಯಂತ ನಂಬಿಕಸ್ಥ ತಂಡವಾಗಿರುವ ಇವರು ಗೌಪ್ಯವಾಗಿ ಅಭ್ಯರ್ಥಿಯ ಮಾಹಿತಿ ಸಂಗ್ರಹಣೆ ಮಾಡುತ್ತಾರೆ. ಯಾವ ಕ್ಷೇತ್ರಕ್ಕೆ ಯಾರನ್ನು ಕಣಕ್ಕಿಳಿಸಬೇಕು, ಅಲ್ಲಿನ ಸ್ಥಿತಿಗತಿ, ಜಾತಿ ಲೆಕ್ಕಾಚಾರ, ಭೌಗೋಳಿಕ ಹಿನ್ನೆಲೆ ಎದುರಾಳಿ ಪಕ್ಷಗಳಿಂದ ಯಾರು ಅಭ್ಯರ್ಥಿಗಳಾಗಲಿದ್ದಾರೆ, ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ಪತ್ತೆಹಚ್ಚುತ್ತಾರೆ.
ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ರಹಸ್ಯವಾಗಿ ಭೇಟಿಯಾಗಿ ಯಾರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ. ಯಾವ ಕಾರಣಕ್ಕಾಗಿ ಅವರಿಗೆ ಟಿಕೆಟ್ ನೀಡಬೇಕು, ಟಿಕೆಟ್ ನೀಡಿದರೆ ಗೆಲ್ಲುವ ಸಾಮಥ್ರ್ಯವಿದೆಯೇ, ಕ್ಷೇತ್ರದಲ್ಲಿ ಮತದಾರರ ಜೊತೆ ಹೊಂದಿರುವ ಸಂಪರ್ಕ, ಪಕ್ಷ ಸಂಘಟನೆ, ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಹೊಂದಿರುವ ಸಂಬಂಧ, ಸರ್ಕಾರದ ವಿರುದ್ದ ಎಷ್ಟು ಬಾರಿ ಹೋರಾಟ ಮಾಡಲಾಗಿದೆ, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗಿದೆಯೇ, ಪ್ರತಿಪಕ್ಷಗಳು ರೂಪಿಸಿರುವ ತಂತ್ರವೇನು? ಎಂಬುದು ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆಯುವರು.
ಈಗಾಗಲೇ ರಾಜ್ಯದ 224 ಕ್ಷೇತ್ರಗಳಲ್ಲಿ ಎರಡು ಬಾರಿ ಸಮೀಕ್ಷೆ ನಡೆಸಲಾಗಿದೆ. ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದಿರುವ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿಕೆ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ರಾಷ್ಟ್ರೀಯ ನಾಯಕರು, ವೀಕ್ಷಕರು ನೀಡುವ ವರದಿ ಆಧರಿಸಿಯೇ ಅಭ್ಯರ್ಥಿಗಳಿಗೆ ಟಿಕೆಟ್ ನಿರ್ಧರಿಸಲಿದ್ದಾರೆ.
ರಾಜ್ಯದಲ್ಲಿ ಇಂದು ಮತ್ತು ನಾಳೆ ವೀಕ್ಷಕರ ತಂಡ ಸಂಚರಿಸಲಿರುವ ಸ್ಥಳಗಳು:
ಧರ್ಮೇಂದ್ರ ಪ್ರಧಾನ್-ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ
ಮುರುಳೀಧರ್ ರಾವ್- ಶಿವಮೊಗ್ಗ ಗ್ರಾಮೀಣ
ಅನುರಾಗ್ ಸಿಂಗ್ ಟಾಕೂರ್-ರಾಯಚೂರು ಕ್ಷೇತ್ರ
ಬಂಡಾರು ದತ್ತಾತ್ರೇಯ್-ಸಿಂಧನೂರು
ಕೈಲಾಶ್ ವಿಜಯ ವರ್ಗಿಯಾ-ಗಂಗಾವತಿ
ರಾಜವರ್ಧನ್ ಸಿಂಗ್ ರಾಥೋಡ್-ಕೆ.ಆರ್.ಪುರಂ
ರಾಜೀವ್ ಪ್ರತಾಪ್-ಮಹಾಲಕ್ಷ್ಮೀ ಲೇಔಟ್
ನರೇಂದ್ರ ಸಿಂಗ್ ತೋಮರ್ – ಜಗಳೂರು
ಜೆ.ಪಿ.ನಡ್ಡಾ – ಕುಣಿಗಲ್
ಭೂಪೇಂದ್ರ ಯಾದವ್-ಪದ್ಮನಾಭನಗರ
ತಾವರ್ ಚಂದ್ ಗೆಹ್ಲೋಟ್ – ಕೆಜಿಎಫ್
ಡಾ.ಸತ್ಯಪಾಲ್ ಸಿಂಗ್ – ದಾವಣಗೆರೆ
ಡಾ.ಮಹೇಶ್ ಶರ್ಮಾ – ಹುಬ್ಬಳ್ಳಿ-ಧಾರವಾಡ ಸೆಂಟ್ರಲ್
ಅರುಣ್ ಸಿಂಗ್ – ಮುದ್ದೇಬಿಹಾಳ್
ವಿನೋದ್ ಸೋನಕರ್-ಹಡಗಲಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ