ಬಜೆಟ್ ಅಧಿವೇಶದ ಸತತ ಐದನೆ ದಿನವೂ ವಿವಿಧ ವಿವಾದಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ

ನವದೆಹಲಿ, ಮಾ.9- ದೇಶದ ವಿವಿಧ ಭಾಗಗಳಲ್ಲಿ ಜನನಾಯಕರ ಪ್ರತಿಮೆಗಳ ಧ್ವಂಸ, ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ, ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಹಾಗೂ ಮತ್ತಿತರ ವಿಷಯಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪ ಮುಂದೂಡಲಾಗಿದೆ.
ಬಜೆಟ್ ಅಧಿವೇಶದ ಸತತ ಐದನೆ ದಿನವೂ ವಿವಿಧ ವಿವಾದಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ. ಐದು ದಿನಗಳ ಕಲಾಪ ನಡೆಯದೆ ಸುಮಾರು 50 ಕೋಟಿ ರೂ. ವ್ಯರ್ಥವಾಗಿದೆ.
ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ಟಿಎಂಸಿ ವಿಷಯವನ್ನು ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿತು. ಇದೇ ವೇಳೆ ಎನ್‍ಡಿಎ ಮಿತ್ರ ಪಕ್ಷ ಟಿಡಿಪಿ ಮತ್ತು ಟಿಆರ್‍ಎಸ್ ಸದಸ್ಯರು ಆಂಧ್ರಪ್ರದೇಶಕ್ಕಾಗಿ ವಿಶೇಷ ಪ್ಯಾಕೇಜ್‍ಗಾಗಿ ತನ್ನ ಬೇಡಿಕೆಯನ್ನು ಯಥಾ ಪ್ರಕಾರ ಮುಂದುವರಿಸಿದರು.
ಇದೇ ವೇಳೆ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಪಟ್ಟು ಹಿಡಿದು ಧರಣಿ ನಡೆಸಿದರು.
ಕಳೆದ ನಾಲ್ಕು ದಿನಗಳಿಂದ ಕಲಾಪಕ್ಕೆ ಅಡ್ಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸುಮಿತ್ರ ಮಹಾಜನ್ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು.
ಆದರೆ, ಇದಕ್ಕೆ ಓಗೊಡದ ಪ್ರತಿಭಟನಾನಿರತ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಧರಣಿ ನಡೆಸಿದರು. ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಗೊಳಿಸಲು ಯತ್ನಿಸಿ ವಿಫಲರಾದ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನ 12.30ಕ್ಕೆ ಮುಂದೂಡಿದರು.
ಮತ್ತೆ ಕಲಾಪ ಸಮಾವೇಶಗೊಂಡಾಗ ಅದೇ ಪರಿಸ್ಥಿತಿ ಮುಂದುವರಿದು ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸ್ಪೀಕರ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.
ಇದರೊಂದಿಗೆ ಸತತ ಐದು ದಿನಗಳಿಂದ ಲೋಕಸಭೆ ಕಲಾಪಕ್ಕೆ ಅಡ್ಡಿಯಾಗಿದೆ.
ರಾಜ್ಯಸಭೆಯಲ್ಲೂ ಗದ್ದಲ: ಸಂಸತ್ತಿನ ಮುಂದುವರೆದ ಬಜೆಟ್ ಅಧಿವೇಶನದ ಐದನೆ ದಿನವೂ ವಿವಿಧ ರಾಜ್ಯಗಳಲ್ಲಿ ಜನನಾಯಕರ ಪ್ರತಿಮೆ ಧ್ವಂಸ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಬಿಎನ್‍ಬಿ) ಹಗರಣ ಹಾಗೂ ಕಾವೇರಿ ಜಲವಿವಾದ ವಿಷಯಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ.
ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರು ಬಿಎನ್‍ಬಿ ಹಗರಣ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಬಿಗಿಪಟ್ಟು ಮುಂದುವರಿಸಿದರು.
ಇದರಿಂದಾಗಿ ಸದನದಲ್ಲಿ ಭಾರೀ ಗದ್ದಲ-ಕೋಲಾಹಲ ನಿರ್ಮಾಣವಾಯಿತು.
ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಪಡಿಸಲು ಸಭಾಪತಿ ವೆಂಕಯ್ಯನಾಯ್ಡು ಮನವಿ ಮಾಡಿದರೂ ಪರಿಸ್ಥಿತಿ ತಿಳಿಗೊಳ್ಳಲಿಲ್ಲ. ಇದರಿಂದ ಬೇಸತ್ತ ನಾಯ್ಡು ಅವರು, ಅರ್ಧ ತಾಸು ಕಾಲ ಕಲಾಪ ಮುಂದೂಡಿದರು.
ಮತ್ತೆ ಕಲಾಪ ಸಮಾವೇಶಗೊಂಡಾಗ ಇದೇ ಪರಿಸ್ಥಿತಿ ಮುಂದುವರೆಯಿತು. ಟಿಎಂಸಿ, ಎಐಎಡಿಎಂಕೆ, ಡಿಎಂಕೆ ಮತ್ತು ಟಿಡಿಪಿ ಸದಸ್ಯರು ತಮ್ಮ ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಧರಣಿ ಮುಂದುವರೆಸಿದ್ದರಿಂದ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ