ಬೆಂಗಳೂರು,ಮಾ.9-ಗಬ್ಬುನಾರುತ್ತಿರುವ ಶೌಚಾಲಯ, ದನದ ಕೊಟ್ಟಿಗೆಯಾದ ವಿದ್ಯಾರ್ಥಿ ಕೊಠಡಿಗಳು. 350 ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಂಶುಪಾಲರಿಲ್ಲದ ಸ್ಥಿತಿ, ಒಂದು ಕೊಠಡಿಗೆ 12 ವಿದ್ಯಾರ್ಥಿಗಳು, ಪುಸ್ತಕಗಳಿಲ್ಲದೆ ಖಾಲಿ ಖಾಲಿಯಾದ ಗ್ರಂಥಾಲಯಗಳು, ಮೂಲಭೂತ ಸೌಕರ್ಯಗಳ ಕೊರತೆ, ನರಕ ಸದೃಶ್ಯವಾದ ಬಿಕೊ ಎನ್ನುತ್ತಿರುವ ವಸತಿ ನಿಲಯಗಳು…
ಇದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಇಲಾಖೆಯಡಿ ನಡೆಯುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಸತಿ ನಿಲಯಗಳ ದುಸ್ಥಿತಿ.
ವಿಜಯನಗರ ಕಾಸಿಯಾ ಭವನದಲ್ಲಿ ಇಂದು ರಾಜ್ಯಾದ್ಯಂತ ಬಿಜೆಪಿ ನಾಯಕರು ನಡೆಸಿದ ಸರ್ಕಾರಿ ಹಾಸ್ಟೆಲ್ಗಳ ಸ್ಥಿತಿಗತಿ ಕುರಿತ ಸಮೀಕ್ಷಾ ವರದಿಯಲ್ಲಿ ಕಂಡುಬಂದ ಪ್ರಮುಖ ಅಂಶಗಳು.
ಕೇಂದ್ರ ಸಚಿವ ಸದಾನಂದಗೌಡ, ಶಾಸಕರಾದ ಡಾ.ಅಶ್ವಥ್ನಾರಾಯಣ, ವಿಧಾನಪರಿಷತ್ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ತಾರಾ ಹಾಗೂ ಶೃತಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ಬಿಬಿಎಂಪಿಯ ಬಿಜೆಪಿ ಮಾಜಿ ಸದಸ್ಯ ರವೀಂದ್ರನಾಥ್ ಸೇರಿದಂತೆ ಮತ್ತಿತರರು ವರದಿಯನ್ನು ಬಿಡುಗಡೆ ಮಾಡಿದರು.
ಹಾಸ್ಟೆಲ್ ದುರ್ವಸತಿ ಹೆಸರಿನಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ವರದಿಯಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಮೂಲಭೂತ ಸೌಕರ್ಯಗಳ ಕೊರತೆ, ಸರ್ಕಾರದ ಇಚ್ಛಾಶಕ್ತಿ ಇಲ್ಲದಿರುವುದು, ಮಧ್ಯವರ್ತಿಗಳ ಹಾವಳಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಬೊಟ್ಟು ಮಾಡಲಾಗಿದೆ.
ನಾಲ್ಕು ತಂಡಗಳಾಗಿ ಸಮೀಕ್ಷೆ ನಡೆಸಿರುವ ಬಿಜೆಪಿ ನಾಯಕರು ಇಂದು 15 ಜಿಲ್ಲೆಗಳ ಹಾಸ್ಟೆಲ್ಗಳ ದುಸ್ಥಿತಿಯ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಸಮಸ್ಯೆಗಳ ಆಗರ:
ಬಿಜೆಪಿ ಬಿಡುಗಡೆ ಮಾಡಿರುವ ವರದಿಯಲ್ಲಿ ಅನೇಕ ಸಮಸ್ಯೆಗಳನ್ನು ತೆರೆದಿಡಲಾಗಿದೆ. 2500ಕ್ಕೂ ಹೆಚ್ಚು ಹಾಸ್ಟೆಲ್ಗಳ ಪೈಕಿ ಶೇ.90ರಷ್ಟು ಹಾಸ್ಟೆಲ್ಗಳಲ್ಲಿ ಇಂಟರ್ನೆಟ್ ಸೌಲಭ್ಯವೇ ಇಲ್ಲ. ಶೇ.70ರಷ್ಟು ಹಾಸ್ಟೆಲ್ಗಳಲ್ಲಿ ಬಿಸಿನೀರು ಬರುವುದು ಆರು ತಿಂಗಳು ಇಲ್ಲ ವರ್ಷಕ್ಕೊಮ್ಮೆ ಮಾತ್ರ.
1183 ಹಾಸ್ಟೆಲ್ಗಳ ವಿದ್ಯಾರ್ಥಿಗಳಿಗೆ ಮಂಚ, ದಿಂಬು, ಹೊದಿಕೆಯೇ ಇಲ್ಲ. ನೆಪಮಾತ್ರಕ್ಕೆ ಒಂದು ಚಾಪೆ, ಕಿತ್ತು ಹೋಗಿರುವ ಬೆಡ್ಶೀಟ್ ಕೊಡಲಾಗಿದೆ. ಇನ್ನು ಬಹುತೇಕ ಹಾಸ್ಟೆಲ್ಗಳಲ್ಲಿ ಸೊಳ್ಳೆ ಮತ್ತು ತಿಗಣೆಗಳ ಕಾಟ ಹೇಳತೀರದು.
ಶೇ.88ರಷ್ಟು ವಿದ್ಯಾರ್ಥಿನಿಯರ ಹಾಸ್ಟೆಲ್ಗಳಲ್ಲಿ ಸ್ಯಾನಿಟರಿ ಪ್ಯಾಡ್ ಸೌಲಭ್ಯವೇ ಇಲ್ಲ. 666 ಹಾಸ್ಟೆಲ್ಗಳಲ್ಲಿ ನಾಲ್ಕು ವಿದ್ಯಾರ್ಥಿಗಳು ಇರಬೇಕಾದ ಕಡೆ 8ರಿಂದ 12 ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯನ್ನು ನೀಡಲಾಗಿದೆ.
ಪ್ರತಿ ನಾಲ್ಕು ಹಾಸ್ಟೆಲ್ಗಳ ಪೈಕಿ ಒಂದು ಹಾಸ್ಟೆಲ್ನಲ್ಲಿ ಕುಡಿಯುವ ನೀರೇ ಇಲ್ಲ . ಶೇ.60ರಷ್ಟು ಹಾಸ್ಟೆಲ್ಗಳಲ್ಲಿ ಶುದ್ಧ ಕುಡಿಯುವ ನೀರು ಮರಿಚೀಕೆಯಾಗಿದೆ. ಕಟ್ಟಡಗಳಿಗೆ 130 ಕೋಟಿ ಹಣವನ್ನು ಬಾಡಿಗೆ ರೂಪದಲ್ಲಿ ನೀಡಲಾಗಿದೆ.
1248 ಕೋಟಿ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಕರೆಯದೆ ಹಣ ಬಿಡುಗಡೆ ಮಾಡಲಾಗಿದೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಕಾಮಗಾರಿಯನ್ನು ಟೆಂಡರ್ ಕರೆಯಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ.
ಗಬ್ಬುನಾರುತ್ತಿರುವ ಅಡುಗೆ ಮನೆ -ಶೌಚಾಲಯ
ಇನ್ನು ಬಹುತೇಕ ಹಾಸ್ಟೆಲ್ಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕಾದ ಅಡುಗೆ ಮನೆ ಹಾಗೂ ಶೌಚಾಲಯಗಳಿಗೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ಅಡುಗೆ ಮನೆಯಲ್ಲಿ ಶುಚಿತ್ವ ಇಲ್ಲದಿರುವುದು, ವಿದ್ಯಾರ್ಥಿಗಳಿಗೆ ಸರಿಯಾದ ತಿಂಡಿ, ಊಟ ಸಿಗದೆ ಪರದಾಡುವ ಪರಿಸ್ಥಿತಿಯಿದ್ದು, ಅಡುಗೆ ಭಟ್ಟರು ಹಾಗೂ ಹಾಸ್ಟೆಲ್ ವಾರ್ಡನ್ಗಳ ನಿರ್ಲಕ್ಷ್ಯ ಇದಕ್ಕೆ ಮೂಲ ಕಾರಣವಾಗಿದೆ.
ಇದೇ ರೀತಿ ಶೌಚಾಲಯಗಳ ಸ್ಥಿತಿ ಹೇಳತೀರದು…ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ಇದನ್ನು ಶುಚಿಗೊಳಿಸುವುದಿಲ್ಲ. ಸ್ವಚ್ಛತೆ ಇಲ್ಲದೆ ಸೊಳ್ಳೆಗಳ ತಾಣವಾಗಿದ್ದು , ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ.