ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿ : ಮೂವರು ವಿದ್ಯಾರ್ಥಿನಿಯರು ಮೃತ

ಬೆಂಗಳೂರು,ಮಾ.9-ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮೂವರು ಎಂಬಿಎ ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯರನ್ನು ಅರ್ಷಿಯಾ, ಹರ್ಷಿಯಾ ಶ್ರೀವಾತ್ಸವ್, ಶೃತಿ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಆಂಧ್ರ, ಜಾರ್ಖಂಡ್ ಮತ್ತು ಕೇರಳ ಮೂಲದವರು.

ನೈಸ್ ರಸ್ತೆಯ ಬನ್ನೇರುಘಟ್ಟ ಜಂಕ್ಷನ್ ಬಳಿ ಇಂದು ಬೆಳಗ್ಗೆ ನಾಲ್ವರು ವಿದ್ಯಾರ್ಥಿಗಳು ಕಾರಿನಲ್ಲಿ ಹೋಗುತ್ತಿದ್ದಾಗ ಬೇಗೂರು ಕೊಪ್ಪ ಬ್ರಿಡ್ಜ್ ಸಮೀಪ ಅತಿ ವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಪರಿಣಾಮವಾಗಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ನಗರದ ಹೊರವಲಯದ ಆನೇಕಲ್ ಸಮೀಪದಲ್ಲಿರುವ ಅಲೆಯನ್ಸ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಾದ ಅರ್ಷಿಯಾ, ಹರ್ಷಿಯಾ, ಶೃತಿ, ಪವಿತ್ ಕೊಹ್ಲಿ ಎಂಬುವರು ಇಂದು ಬೆಳಗ್ಗೆ 7.30ರ ಸಂದರ್ಭದಲ್ಲಿ ಕಾರನ್ನು ಬಾಡಿಗೆ ಪಡೆದುಕೊಂಡು ಹೋಗುತ್ತಿದ್ದರು.

ಪ್ರವೀಣ್ ಎಂಬುವರು ಕಾರನ್ನು ಚಾಲನೆ ಮಾಡುತ್ತಿದ್ದರು. ಕಾರು ಬನ್ನೇರುಘಟ್ಟ ರಸ್ತೆ ಜಂಕ್ಷನ್ ಬಳಿ ಬರುತ್ತಿದ್ದಂತೆ ಅತಿವೇಗವಾಗಿ ನಿಯಂತ್ರಣ ತಪ್ಪಿ ಕೊಪ್ಪ ಬ್ರಿಡ್ಜ್ ಸಮೀಪ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದವರೆಲ್ಲ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಇವರನ್ನು ಸಮೀಪದ ವಿಜಯಶ್ರೀ ಆಸ್ಪತ್ರೆಗೆ ಕರೆದೊಯ್ದಿದ್ದು , ವೈದ್ಯರು ಪರೀಕ್ಷಿಸಿ ಅರ್ಷಿಯಾ ಮತ್ತು ಹರ್ಷಿಯಾ ಶ್ರೀವಾತ್ಸವ್ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಹುಳಿಮಾವು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ