ಅಕ್ರಮವಾಗಿ ರಾಜ್ಯಕ್ಕೆ ಶಸ್ತ್ರಾಸ್ತ್ರಗಳು ನುಸುಳುತ್ತಿವೆ – ಗೃಹ ಸಚಿವ ರಾಮಲಿಂಗಾರೆಡ್ಡಿ

ಮೈಸೂರು, ಮಾ.3-ರಾಜ್ಯಕ್ಕೆ ಅಕ್ರಮವಾಗಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಶಸ್ತ್ರಾಸ್ತ್ರಗಳು ನುಸುಳುತ್ತಿವೆ. ಈ ಬಗ್ಗೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿ ಹಾಗೂ ಮಹಾರಾಷ್ಟ್ರದಿಂದ ಅಕ್ರಮ ಶಸ್ತ್ರಾಸ್ತ್ರಗಳು ಬರುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಇನ್ನಷ್ಟು ವಿವರಗಳನ್ನು ಕಲೆ ಹಾಕಿ ಈ ಅಕ್ರಮದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಕ್ರಮ ಶಸ್ತ್ರಾಸ್ತ್ರಗಳು ರವಾನೆಯಾಗುತ್ತಿರುವ ಬಗ್ಗೆ ಯುಪಿ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಗಂಭೀರವಾಗಿ ಚಿಂತಿಸಬೇಕಿದೆ. ಏಕೆಂದರೆ ಸಮಸ್ಯೆಯನ್ನು ಮೂಲದಲ್ಲೇ ಬಗೆಹರಿಸಿದರೆ ಮಾತ್ರ ಮಾಫಿಯಾ ನಿಯಂತ್ರಣ ಸಾಧ್ಯ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳು ಸುಲಭವಾಗಿ ಸಿಗುತ್ತವೆ. ಆದರೆ ಅಲ್ಲಿನ ಬಿಜೆಪಿ ಮುಖಂಡರು ಇಲ್ಲಿಗೆ ಬಂದು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಕೇಂದ್ರ ಗೃಹ ಸಚಿವ ರಾಜ್ಯದಲ್ಲೇ ಅಪರಾಧಗಳ ಸಂಖ್ಯೆ ಹೆಚ್ಚಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೊಲೆ ಆರೋಪವಿದೆ. ನಮ್ಮಲ್ಲಿ ಭೂಗತ ವ್ಯಕ್ತಿಗಳು ಮಾತ್ರ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆ. ಲೈಸೆನ್ಸ್ ಹೊಂದಿರುವವರು ಮತ್ತು ಸಾಮಾನ್ಯರಿಗೆ ಶಸ್ತ್ರಾಸ್ತ್ರಗಳು ಸುಲಭವಾಗಿ ಸಿಗುವ ಪರಿಸ್ಥಿತಿ ನಮ್ಮಲ್ಲಿಲ್ಲ ಎಂದು ವಿವರಿಸಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಶೀಘ್ರದಲ್ಲೇ ಬೇಧಿಸುವುದಾಗಿ ಹೇಳಿದ್ದೇವೆ. ಈ ವಿಚಾರದಲ್ಲಿ ಅಷ್ಟನ್ನು ಮಾತ್ರ ಹೇಳಲು ಸಾಧ್ಯ ಎಂದ ಅವರು, ಗೌರಿ ಹತ್ಯೆ ಪ್ರಕರಣದ ಪ್ರಗತಿಯನ್ನು ವಿಧಾನಸೌಧದಲ್ಲೇ ವಿವರಿಸಿದ್ದೇನೆ. ಅದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನುಳಿದ ಮಾಹಿತಿಯನ್ನು ಎಸ್‍ಐಟಿ ಮುಂದಿನ ದಿನಗಳಲ್ಲಿ ತಿಳಿಸಲಿದೆ. ಪಿಎಫ್‍ಐ ಸಂಘಟನೆಗಳ ಪ್ರಕರಣಗಳನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ. ಆದರೆ, ಬಿಜೆಪಿಯವರು ಈ ವಿಚಾರದಲ್ಲಿ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ಕಾರಣಕ್ಕಾಗಿ ಕೇಸು ದಾಖಲು ಮಾಡುತ್ತಾರೆ ಎಂಬ ಆರೋಪ ತಳ್ಳಿ ಹಾಕಿದ ಅವರು, ಜೆಡಿಎಸ್ ಹಾಗೂ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಯಾರ ಮೇಲೂ ಕೇಸು ದಾಖಲಿಸಿಲ್ಲ. ಅದರ ಅಗತ್ಯವೂ ನಮಗಿಲ್ಲ ಎಂದು ತಿಳಿಸಿದರು.

ಕೊಲೆ, ಕೊಲೆ ಯತ್ನ ಮುಂತಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಗಳ ಮೇಲೆ ರೌಡಿಶೀಟ್ ಹಾಕಲಾಗಿದೆ. ವಯಸ್ಸಾದವರು ಮತ್ತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದವರ ಮೇಲಿನ ರೈತ ಚಳವಳಿಗಳು ಹಾಗೂ ವಿದ್ಯಾರ್ಥಿ ಹೋರಾಟಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ