ಬೆಂಗಳೂರು, ಫೆ.26-ಮಹಾನಗರದ ಆಯಕಟ್ಟಿನ ಪ್ರದೇಶದಲ್ಲಿದ್ದ ಈ ಜಾಗವನ್ನು ಆಕ್ರಮಣಕಾರರಿಂದ ಉಳಿಸಿದ ಕಾರಣಕ್ಕಾಗಿ ಮಹಾನ್ನಾಯಕ ಡಾ.ರಾಜ್ಕುಮಾರ್ ಹೆಸರಿನಲ್ಲಿ ಬೃಹತ್ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಾಗಿದೆ. ಜಾಗ ಉಳಿಸುವಲ್ಲಿ ಹೋರಾಟ ಮಾಡಿದ ಟಿ.ವೆಂಕಟೇಶ್, ಸಾ.ರಾ.ಗೋವಿಂದು ಮತ್ತಿತರರನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕೆಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್ನಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ರಾಜ್ಕುಮಾರ್ ಒಳಾಂಗಣ ಕ್ರೀಡಾಂಗಣ ಹಾಗೂ ಡಾ.ರಾಜ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾಗ ಉಳಿದ ಕಾರಣಕ್ಕೆ ಇಲ್ಲಿ ಇಂತಹ ಕ್ರೀಡಾಂಗಣವನ್ನು ನಿರ್ಮಿಸಲು ಸಾಧ್ಯವಾಯಿತು. ಆರೋಪ-ಪ್ರತ್ಯಾರೋಪಗಳು ಏನೇ ಇರಲಿ, ಅಭಿವೃದ್ಧಿ ಕೆಲಸಗಳು ಮಾಡಿದ ಸಂದರ್ಭದಲ್ಲಿ ಅದು ಸಹಜವಾಗಿರುತ್ತದೆ. ಆದರೆ ಇಷ್ಟು ದೊಡ್ಡ ಮಟ್ಟದ ಜಾಗ ಉಳಿಯಿತಲ್ಲ ಎಂದು ಹೇಳಿದರು.
ಈ ಜಾಗ ಉಳಿಸುವುದಕ್ಕಾಗಿ ಹೋರಾಟ ಮಾಡಿ ಕ್ರಿಮಿನಲ್ ಕೇಸುಗಳನ್ನು ಹಾಕಿಸಿಕೊಂಡವರೂ ಇದ್ದಾರೆ. ಅವರನ್ನು ಮೊದಲು ನಾವು ನೆನೆಸಿಕೊಳ್ಳಬೇಕು ಎಂದು ಹೇಳಿದರು.
ಉಳಿಸಿಕೊಂಡ ಜಾಗ ಸದುಪಯೋಗವಾಗಿದೆ. ಬೃಹತ್ತಾದ ಕ್ರೀಡಾಂಗಣ ನಿರ್ಮಾಣವಾಗಿದೆ. ಬಹಳ ಸಂತೋಷದ ವಿಷಯ. ಅದು ವರನಟ ಡಾ.ರಾಜ್ಕುಮಾರ್ ಹೆಸರಿನಲ್ಲಿ ನಿರ್ಮಾಣವಾಗಿರುವುದು ಇನ್ನೂ ಸಂತಸದ ವಿಷಯ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಅಭಿವೃದ್ಧಿ ಕೆಲಸದಲ್ಲಿ ನಾವೆಲ್ಲ ಒಂದಾಗೋಣ. ಮಹಾಲಕ್ಷ್ಮಿ ಲೇಔಟ್ನಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ನಡೆದಿವೆ.
ಇಲ್ಲಿನ ಶಾಸಕರಾದ ಗೋಪಾಲಯ್ಯ ಅವರಿಗೆ ಅನುದಾನ ಪಡೆಯಲು ಹೆಚ್ಚಿನ ಅವಕಾಶ ಸಿಕ್ಕಿತು. ಹೆಚ್ಚಿನ ಅನುದಾನ ಪಡೆದು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪಕ್ಷ ಬೇರೆ ಇರಬಹುದು, ಆದರೆ ಮಾಡಿರುವ ಕೆಲಸವನ್ನು ಹೇಳುವುದರಲ್ಲಿ ಯಾವುದೇ ಸಂಕೋಚವಿಲ್ಲ. ಎಲ್ಲ ಬಿಬಿಎಂಪಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ ಎಂದು ರೇವಣ್ಣ ಪ್ರಶಂಸಿಸಿದರು.
ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯದಲ್ಲಿ ಡಾ.ರಾಜ್ಕುಮಾರ್ ಅವರ ಹೆಸರೇ ಸಂಚಲನ ಸೃಷ್ಟಿಸುತ್ತದೆ. ಮಹಾಲಕ್ಷ್ಮಿ ಲೇಔಟ್ನಲ್ಲಿ ಕ್ರೀಡಾಂಗಣಕ್ಕೆ ಡಾ.ರಾಜ್ಕುಮಾರ್ ಅವರ ಹೆಸರಿಟ್ಟಿರುವುದು ಇಲ್ಲಿನ ಜನರಿಗಷ್ಟೇ ಅಲ್ಲ, ರಾಜ್ಯದ ಎಲ್ಲಾ ಜನರನ್ನು ಪುಳಕಿತರನ್ನಾಗಿಸುತ್ತದೆ. ಇಂದಿನ ಈ ಕಾರ್ಯಕ್ರಮಕ್ಕೆ ಅವರ ಪುತ್ರ ಪುನೀತ್ರಾಜ್ಕುಮಾರ್ ಆಗಮಿಸಿರುವುದು ಕಾರ್ಯಕ್ರಮವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದೆ ಎಂದು ಹೇಳಿದರು.
ಇದೇ ಕ್ಷೇತ್ರದಲ್ಲಿರುವ ಡಾ.ರಾಜ್ಕುಮಾರ್ ಸ್ಮಾರಕ ಕೇಂದ್ರದಲ್ಲಿ ಧ್ಯಾನಕೇಂದ್ರ, ಯೋಗ ಕೇಂದ್ರ ನಿರ್ಮಿಸಲು 18 ಕೋಟಿ ರೂ. ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಸಚಿವರು ಹೇಳಿದರು.
ಡಾ.ರಾಜ್ಕುಮಾರ್ ಕನ್ನಡಿಗರಷ್ಟೇ ಅಲ್ಲ, ಇಡೀ ದೇಶಕ್ಕೆ ಪ್ರೀತಿಪಾತ್ರರಾದ ನಟರಾಗಿದ್ದರು. ಅಮಿತಾಬ್ ಬಚ್ಚನ್, ರಜನೀಕಾಂತ್ರಂತಹ ಮೇರು ನಟರು ಅವರನ್ನು ಅಗಾಧವಾಗಿ ಇಷ್ಟಪಡುತ್ತಾರೆ, ಆರಾಧಿಸುತ್ತಾರೆ ಎಂದು ಹೇಳಿದರು.
ಹಿಂದಿನ ಸರ್ಕಾರದಲ್ಲಿ ಶಾಸಕರು ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕಾರಣ ಆಗಿನ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡಿರಲಿಲ್ಲ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಹೆಚ್ಚಿನ ಅನುದಾನ ನೀಡಿರುವ ಕಾರಣ ಇಡೀ ಬೆಂಗಳೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಪಕ್ಷಬೇಧ ಮರೆತು ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ.
ಬಿಬಿಎಂಪಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಹಿಂದಿನವರು ಮಾಡಿದ ಸಾಲವನ್ನು ತೀರಿಸಿ ಬಾಕಿ ಇರುವ ಬಿಲ್ಗಳನ್ನು ಪಾವತಿ ಮಾಡಲಾಗಿದೆ. ಎಲ್ಲರೂ ಒಮ್ಮತದಿಂದ ಕೆಲಸ ಮಾಡುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಸೇರಿದಂತೆ ಮುಖ್ಯಮಂತ್ರಿಗಳ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಆಯುಕ್ತರು, ಮೇಯರ್ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಹಣಕಾಸಿನ ತೊಂದರೆ ಇಲ್ಲ. ಉದ್ಯಾನವನಗಳ ಅಭಿವೃದ್ಧಿ, 10 ಲಕ್ಷ ಸಸಿ ನೆಡುವಿಕೆ, 50 ಕೆರೆಗಳ ಸಂರಕ್ಷಣೆ ಸೇರಿದಂತೆ ನುಡಿದಂತೆ ನಡೆಯುತ್ತಿದ್ದೇವೆ. ನಮ್ಮ ಮುಖ್ಯಮಂತ್ರಿಗಳು ಸಾಧನೆಯೊಂದಿಗೆ ಮಾತನಾಡುತ್ತಾರೆ. ಆದರೆ ಕೆಲವರು ಕೇವಲ ಟೀಕೆ ಮಾಡುವುದನ್ನೇ ಸಾಧನೆ ಮಾಡಿಕೊಂಡಿದ್ದಾರೆ ಎಂದು ಪ್ರತಿಪಕ್ಷಗಳನ್ನು ಜಾರ್ಜ್ ಟೀಕಿಸಿದರು.
ಬೆಂಗಳೂರು ಮಹಾನಗರ ವೈಬ್ರೆಂಟ್ ಸಿಟಿಯಾಗಿದೆ. ಎಲ್ಲಾ ಎನ್ಜಿಒಗಳು, ವಿದ್ಯಾರ್ಥಿಗಳು, ಸಾರ್ವಜನಿಕರ ಸಹಯೋಗದೊಂದಿಗೆ ಕ್ಲೀನ್ ಸಿಟಿ ಮಾಡುತ್ತಿದ್ದೇವೆ ಎಂದರು.
ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ ಜನರ ಬಹಳ ಹಿಂದಿನ ಕನಸು ರಾಜ್ಕುಮಾರ್ ಒಳಾಂಗಣ ಕ್ರೀಡಾಂಗಣ. ಅದು ಇಂದು ನನಸಾಗಿದೆ. ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್, ಯೋಗ ಶಾಲೆ, ವ್ಯಾಯಾಮ ಶಾಲೆ, ಸಭಾಂಗಣ, ರಂಗಮಂದಿರ ಸೇರಿದಂತೆ ಸುಸಜ್ಜಿತ ಕ್ರೀಡಾಂಗಣವನ್ನು ಇಂದು ಲೋಕಾರ್ಪಣೆ ಮಾಡುತ್ತಿರುವುದು ಸಂತಸದ ವಿಷಯ.
ಹಿಂದೆ ಇದ್ದ ಶಾಸಕರು, ಕಾಪೆರ್Çೀರೇಟರ್ಗಳು ಕೂಡ ರಾಜ್ಕುಮಾರ್ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಕೆಲಸವನ್ನು ಮಾಡಿದ್ದಾರೆ. 2015 ಆಗಸ್ಟ್ ತಿಂಗಳಲ್ಲಿ ಪ್ಲ್ಯಾಸ್ಟಿಂಗ್ ಕೂಡ ಆಗಿರಲಿಲ್ಲ. ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು 400 ಜನರು ಏಕಕಾಲದಲ್ಲಿ ಯೋಗ, 75 ಜನರು ಜಿಮ್, ಶೆಟಲ್ ಕಾಕ್ ಆಡಬಹುದಾದ ಎಲ್ಲಾ ಸೌಲಭ್ಯಗಳುಳ್ಳ ಸುಸಜ್ಜಿತ, ಶಾಶ್ವತವಾಗಿ ಉಳಿಯುವ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ.
ಇದರಲ್ಲಿ ಹುಳುಕು ಹುಡುಕುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಮಹಾಲಕ್ಷ್ಮಿ ಲೇಔಟ್ನಲ್ಲಿ ಜಯಪ್ರಕಾಶ್ ನಾರಾಯಣ್ ಹೆಸರಿನಲ್ಲಿ ಡಯಾಲಿಸಿಸ್ ಕೇಂದ್ರ, ಅಂಡರ್ಪಾಸ್, ಫ್ಲೈಓವರ್, ಪಾರ್ಕ್ಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, 5 ಕೋಟಿ ವೆಚ್ಚದ ಹೆರಿಗೆ ಆಸ್ಪತ್ರೆ ನಿರ್ಮಾಣ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾಮಗಾರಿಗಳ ಮೂಲಕ ಮಹಾಲಕ್ಷ್ಮಿ ಲೇಔಟ್ ಮಾದರಿ ಕ್ಷೇತ್ರವನ್ನಾಗಿ ಮಾಡಿರುವ ಹೆಮ್ಮೆ ನಮಗಿದೆ ಎಂದು ಹೇಳಿದರು.
ನಮ್ಮ ಕ್ಷೇತ್ರದಲ್ಲಿ ರಾಜ್ಕುಮಾರ್ ಅವರ ಸ್ಮಾರಕ, ರಾಜ್ಕುಮಾರ್ ಅವರ ಪ್ರತಿಮೆ, ರಾಜ್ಕುಮಾರ್ ಅವರ ಹೆಸರಿನ ಕ್ರೀಡಾಂಗಣವಿರುವುದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಈ ಜಾಗದ ಉಳಿಸಲು ಹೋರಾಟ ಮಾಡಿದ ದೇವರಾಜ್, ಆರ್.ನಾರಾಯಣ್, ಸಾ.ರಾ.ಗೋವಿಂದು, ಬಸವರಾಜ್, ರಮೇಶ್, ರಾಮಣ್ಣ, ಸತೀಶ್, ಸೋಮಶೇಖರ್, ಕನ್ನಡ ರಾಜು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಗೌರವಿಸಲಾಯಿತು.
ಮೇಯರ್ ಆರ್.ಸಂಪತ್ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಮಾಜಿ ಉಪಮೇಯರ್ ಎಸ್.ಪಿ.ಹೇಮಲತಾ ಗೋಪಾಲಯ್ಯ, ಪಾಲಿಕೆ ಸದಸ್ಯರಾದ ಭದ್ರೇಗೌಡ, ಖ್ಯಾತ ಚಲನಚಿತ್ರ ನಟ ಪುನೀತ್ರಾಜ್ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಹದೇವ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಮ್ಮ, ಬಿಬಿಎಂಪಿ ಸದಸ್ಯರಾದ ಕೇಶವಮೂರ್ತಿ, ರಾಜೇಂದ್ರಕುಮಾರ್, ಕೃಷ್ಣಮೂರ್ತಿ, ಸ್ಥಳೀಯ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.